ಸುದ್ದಿಮೂಲ ವಾರ್ತೆ
ಮೈಸೂರು ಅ.19:ಕವಿ, ಸಾಹಿತಿಗಳ ಬರಹಕ್ಕೆ ಸಾಮಾಜಿಕ ಜವಾಬ್ದಾರಿ ಇದೆ. ಆ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ಬದುಕಿದರೆ ಮಾತ್ರ ಮಾತನಾಡುವ ನೈತಿಕ ಶಕ್ತಿ, ಧೈರ್ಯ ಇರುತ್ತದೆ. ಬರೆದಂತೆ ಬದುಕುವುದು ಹೊಣೆಗಾರಿಕೆ. ಸಾಹಿತ್ಯ ಬರೆಯುವ ಪ್ರತಿಯೊಬ್ಬರಿಗೂ ಸಾಮಾಜಿಕ ಜವಾಬ್ದಾರಿ ಇದೆ ಎಂದು ಖ್ಯಾತ ಕವಿ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ದಸರಾ ಪ್ರಯುಕ್ತ ನಗರದ ಮಾನಸ ಗಂಗೋತ್ರಿಯಲ್ಲಿನ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಕವಿಗೋಷ್ಠಿಯ ಮೂರನೇ ದಿನವಾದ ಇಂದು ಪ್ರಾದೇಶಿಕ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ, ಜಾಗತಿಕ ವಾತಾವರಣದೊಳಗೆ ಯಾರೂ ಕೂಡ ಸಂತೋಷ ಪಡುವಂತಹ ಸ್ಥಿತಿಯಲ್ಲಿ ಇಲ್ಲ ಎಂದು ವಿಷಾದಿಸಿದರು.
ದೇಶವನ್ನು ಒಳಗೊಂಡಂತೆ ಇಡೀ ಜಗತ್ತಿನ ವ್ಯಾಪ್ತಿಯ ಒಳಗೆ ನೋಡಿದರೆ ಮಕ್ಕಳ ಮೇಲೆ ಮಹಿಳೆಯರ ಮೇಲೆ ಆಗುತ್ತಿರುವಂತಹ ಹಲ್ಲೆಯಿಂದ ಹಿಡಿದು ಯುದ್ಧವನ್ನು ಉಂಟು ಮಾಡುತ್ತಿರುವ ಭೀತಿ ಮತ್ತು ಅಮಾನವೀಯತೆಯ ವಿಜೃಂಭಣೆಯನ್ನು ನೋಡಿದಾಗ ಮಾತು ಕಟ್ಟುತ್ತದೆ. ಜಗತ್ತಿನ ಯಾವ ಮೂಲೆಯೂ ಕೂಡ ಸುರಕ್ಷಿತವಾಗಿ ಉಳಿಯಲಾರದ ಪರಿಸ್ಥಿತಿಯೊಳಗಿನ ವಾತಾವರಣ ಇಂದು ಉಂಟಾಗಿದೆ. ಜನಾಂಗೀಯ ದ್ವೇಷ ಇಂದು ಇಡೀ ಜಗತ್ತಿಗೆ ವ್ಯಾಪಿಸಿದೆ ಎಂದರು.
ಕಾವ್ಯಕ್ಕೆ, ಸಾಹಿತ್ಯಕ್ಕೆ, ಕಲೆಗೆ ಒಂದು ಹೊಣೆಗಾರಿಕೆ ಇದೆ ಅದು ಸಾಮಾಜಿಕ ಹೊಣೆಗಾರಿಕೆ. ಯಾವುದೇ ಭಾಷೆಯ ಸಾಹಿತ್ಯ, ಕಲೆ ಅನ್ನುವುದು ಕೇವಲ ಭಾಷೆಗೆ ಮಾತ್ರ ಸೀಮಿತವಾದಂತೆ ಮಾತನಾಡುವುದಿಲ್ಲ. ಅದು ವಿಶ್ವ ವ್ಯಾಪ್ತಿಯೊಳಗೆ ಲೋಕದರ್ಶನವನ್ನು ಕಟ್ಟಿಕೊಡುತ್ತದೆ. ಈಗಿನ ವಾತಾವರಣದೊಳಗಿನ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತಂತಹ ಮನಸ್ಸುಗಳ ಮಾತುಗಳನ್ನು ಪತ್ರಿಕೆಗಳಲ್ಲಿ ಕಾಣಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕವಿಗೋಷ್ಠಿಯ ಕಾರ್ಯಾಧ್ಯಕ್ಷರಾದ ಡಾ.ಎಸ್.ವಿಜಯ್ ಕುಮಾರಿ ಕರಿಕಲ್, ಖ್ಯಾತ ಸಾಹಿತಿ ಡಾ.ಎಚ್.ಟಿ ಪೋತೆ, ಖ್ಯಾತ ಕವಯತ್ರಿಚ.ಸರ್ವಮಂಗಳ, ಪ್ರಾದೇಶಿಕ ಕವಿಗೋಷ್ಠಿ ಉಪಸಮಿತಿಯ ವಿಶೇಷ ಅಧಿಕಾರಿ ಡಾ.ಎಂ.ದಾಸೇಗೌಡ ಮತ್ತು ಉಪಸಮಿತಿಯ ಅಧ್ಯಕ್ಷ ಮಹೇಶ್ ಅಂಬಲಾರೆ ಹಾಗೂ ಉಪಾಧ್ಯಕ್ಷರುಗಳಾದ ದಂಡಿನ ಕೆರೆ ನಾಗರಾಜು, ರವಿಚಂದ್ರನ್ ಇತರರು ಇದ್ದರು.