ಅಮರೇಶ ಅಲಬನೂರು
ಸಿಂಧನೂರು.ಏ.೦೩ –
ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಪಡಿಸಲಾಗಿದೆ. ಸಿಂಧನೂರಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಮಲ ಅರಳಿಸಲು ನಾಯಕರ ದಂಡೇ ಟಿಕೆಟ್ಗೆ ಮುಗಿಬಿದ್ದಿದ್ದು, ಟಿಕೆಟ್ ಯಾರ ಪಾಲಾಗಲಿದೆ ಎನ್ನುವದು ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಟಿಕೆಟ್ ಖಚಿತ ಪಡಿಸಿಕೊಂಡೇ ಬಿಜೆಪಿ ಸೇರಿದ್ದೇನೆ ಎಂದು ಕೆ.ಕರಿಯಪ್ಪ ಹೇಳುತ್ತಿದ್ದರೆ, ಉಪ್ಪಾರ ಸಮಾಜದ ಗುರುಗಳಿಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಭರವಸೆ ನೀಡಿದ್ದರಿಂದ ಈ ಬಾರಿ ತಮಗೆ ಟಿಕೆಟ್ ಖಚಿತ ಎನ್ನುವ ಅಭಿಪ್ರಾಯದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಕೆ.ಮರಿಯಪ್ಪ ಇದ್ದಾರೆ. ಮಸ್ಕಿ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ವರಿಷ್ಠರು ಅಭಯ ನೀಡಿದಂತೆ ಈಗಾಗಲೇ ರಾಜ್ಯಮಟ್ಟದ ನಿಗಮ ಮಂಡಳಿ ನೀಡಿದ್ದು, ಟಿಕೆಟ್ ಸಹ ನೀಡಲಿದ್ದಾರೆ ಎನ್ನುವ ವಿಶ್ವಾಸದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಪ್ರಯತ್ನ ನಡೆಸಿದ್ದಾರೆ. ಇದರ ಮಧ್ಯೆ ಕಳದೊಂದು ದಶಕದಿಂದ ಪಕ್ಷ ಸಂಘಟನೆ ಮಾಡುವ ಜೊತೆಗೆ ಪಕ್ಷದ ನೀಡಿದ ಜವಾಬ್ದಾರಿ ನಿರ್ವಹಿಸಿದ ಎರಡು ಬಾರಿ ಜಿ.ಪಂ.ಸದಸ್ಯರಾಗಿದ್ದ ಅಮರೇಗೌಡ ವಿರುಪಾಪುರ ಅವರೂ ಸಹ ಹಿಂದೆ ಬಿದ್ದಿಲ್ಲ. ತೆರೆ ಮರೆಯಲ್ಲಿ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಸಮಾಜದ ಸೇವೆ ಮೂಲಕ ರಾಜಕೀಯಕ್ಕೆ ಬಂದ ರಾಜೇಶ ಹಿರೇಮಠ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆರ್ಎಸ್ಎಸ್ ಮೂಲದ ಇವರು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ ಈಗಾಗಲೇ ಎರಡು ಬಾರಿ ಸ್ಪರ್ಧಿಸಿ ಪರಾಜಿತರಾದ, ಕಾಡಾ ಅಧ್ಯಕ್ಷರಾಗಿದ್ದ ಕೊಲ್ಲಾ ಶೇಷಗಿರಿರಾವ್ ಅವರು ಇಲ್ಲಿಯವರೆಗೆ ಆಕಾಂಕ್ಷಿಗಳಾಗಿದ್ದರು. ಆದರೆ ಕೆ.ಕರಿಯಪ್ಪ ಬಿಜೆಪಿ ಸೇರಿಸಲು ಮುಂಚೂಣಿಯಲ್ಲಿದ್ದರು. ಹೀಗಾಗಿ ಸ್ಪರ್ಧಾಕಣದಿಂದ ಶೇಷಗಿರಿರಾವ್ ಕೊಲ್ಲಾ ಬಹುತೇಕ ಹೊರನಡೆದಂತೆ ಆಗಿದೆ.
ಪ್ರಸ್ತುತ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡದಿವೆ. ಯಾರು ಅಭ್ಯರ್ಥಿಗಳಾದರೆ ಗೆಲ್ಲಬಹುದು. ಇಲ್ಲವೇ ಎಷ್ಟು ಮತಗಳನ್ನು ಗಳಿಸಬಹುದು ಎನ್ನುವ ಲೆಕ್ಕಾಚಾರಗಳು ನಡೆದಿವೆ. ಕೆ.ವಿರೂಪಾಕ್ಷಪ್ಪ ಪ್ರಶ್ನಾತೀತ ನಾಯಕರಾಗಿದ್ದರೂ ಅವರ ಸ್ಪರ್ಧೆಗೆ ವಯಸ್ಸು ಅಡ್ಡಿಯಾಗುತ್ತದೆ ಎನ್ನುವ ಬಗ್ಗೆ ಚರ್ಚೆಗಳನ್ನು ನಡೆದಿವೆ. ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕೆ.ಕರಿಯಪ್ಪ ಅವರೇ ಸೂಕ್ತ ಅಭ್ಯರ್ಥಿ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಸೇರುವ ಸಂದರ್ಭದಲ್ಲಿ ಕೊಲ್ಲಾ ಶೇಷಗಿರಿರಾವ್ ಹೊರತು ಪಡಿಸಿ, ದೊಡ್ಡಪ್ಪ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರನ್ನು ಸಹ ಭೇಟಿ ಮಾಡಿಲ್ಲ. ಉಳಿದ ನಾಯಕರನ್ನು ಸಂಪರ್ಕಿಸಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಗಾದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಮಧ್ಯೆ ಪೈಪೋಟಿಯಿದ್ದರೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಜಿಲ್ಲೆಯಲ್ಲಿ ಈ ಬಾರಿ ಕುರುಬ ಸಮಾಜ ಕಾಂಗ್ರೆಸ್ಗೆ ಅಭಯ ನೀಡಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಸಿಂಧನೂರು ಕ್ಷೇತ್ರದಿಂದ ಕೆ.ಕರಿಯಪ್ಪ ಸ್ಪರ್ಧಿಸಿದರೆ ಕುರುಬ ಸಮಾಜದ ಇನ್ನಷ್ಟು ಗೊಂದಲಕ್ಕೀಡಲಾಗಿದೆ ಎನ್ನುವ ಬಗ್ಗೆಯೂ ಅಲ್ಲಲ್ಲಿ ಚರ್ಚೆಗಳು ನಡೆದಿವೆ. ಜೊತೆಗೆೆ ಕಳೆದ ಎರಡೂವರೆ ದಶಕದಿಂದಲೂ ಕ್ಷೇತ್ರದಲ್ಲಿ ಲಿಂಗಾಯತರದ್ದೇ ದರ್ಬಾರು ಆಗಿದ್ದು, ಹಂಪನಗೌಡ ಬಿಟ್ಟರೆ ನಾಡಗೌಡ. ನಾಡಗೌಡ ಬಿಟ್ಟರೆ ಹಂಪನಗೌಡ ಎನ್ನುವಂತಾಗಿದೆ. ೨೦೧೩ರಲ್ಲಿ ಬಿಎಸ್ಆರ್ನಿಂದ ಸ್ಪರ್ಧಿಸಿದ್ದ ಕೆ.ಕರಿಯಪ್ಪ ಅವರು ಅಂದಿನ ಹಾಲಿ ಶಾಸಕ ವೆಂಕಟರಾವ ನಾಡಗೌಡರನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದಿದ್ದರು ಎನ್ನುವದು ವಿಶೇಷ. ಹಿಂದುಳಿದ ವರ್ಗಕ್ಕೆ ಸೇರಿದ ಕೆ.ಕರಿಯಪ್ಪ ಅವರಿಗೆ ಸ್ಥಳೀಯ ಮತದಾರರು ಅಭಯ ನೀಡುವರೆ ಎನ್ನುವ ಪ್ರಶ್ನೆ ಎದುರಾಗಿದೆ.
–