ಸುದ್ದಿಮೂಲ ವಾರ್ತೆ
ಬೆಂಗಳೂರು, ಆ. 14 : ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ ಬೀಳಲಿದೆ.. ಆಗಸ್ಟ್ 4ರಿಂದ 214ನೇ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಆಗಸ್ಟ್ 15ರಂದು ಫಲಪುಷ್ಪ ಪ್ರದರ್ಶನ ಮುಕ್ತಾಯವಾಗಲಿದೆ.
ಇದುವರೆಗೂ ಈ ಫಲಪುಷ್ಪ ಪ್ರದರ್ಶನವನ್ನು 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಟಿಕೆಟ್ ಮಾರಾಟದಿಂದಲೆ ತೋಟಗಾರಿಕಾ ಇಲಾಖೆ 1.8 ಕೋಟಿ ರೂಪಾಯಿ ಸಂಗ್ರಹಿಸಿದೆ. ಲಾಲ್ ಬಾಗ್ ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಹಿರಿಯರಿಗೆ 70 ರೂ., ಮಕ್ಕಳಿಗೆ 30 ರೂ. ನಿಗದಿ ಮಾಡಲಾಗಿದೆ.
ಈ ಬಾರಿ ಕರ್ನಾಟಕದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಗೆ ಅರ್ಪಿಸಲಾಗಿದೆ. ವಿಧಾನಸೌಧದ 18 ಅಡಿ ಪ್ರತಿಕೃತಿ, 14 ಅಡಿಯ ಕೆಂಗಲ್ ಹನುಮಂತಯ್ಯ ಪ್ರತಿಮೆ ಈ ಬಾರಿಯ ಫಲಪುಷ್ಪ ಪ್ರದರ್ಶನದ ಆಕರ್ಷಣೆಯಾಗಿದೆ. 10 ಲಕ್ಷ ಹೂವುಗಳನ್ನು ಬಳಸಿ ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹ ಸೌಧದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ.
ಇಂದು ಒಂದೇ ದಿನ ಲಕ್ಷಾಂತರ ಮಂದಿ ಫಲಪುಷ್ಪ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಮಾಡಲಾಗಿದೆ. ಇದಕ್ಕಾಗಿಯೇ ಬೆಳಗ್ಗೆ 7 ಗಂಟೆಯಿಂದಲೇ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಸಂಚಾರ ದಟ್ಟಣೆ ತಪ್ಪಿಸುವ ದೃಷ್ಟಿಯಿಂದ ಫಲಪುಷ್ಪ ವೀಕ್ಷಣೆಗೆ ಬರುವವರು ಸಾರ್ವಜನಿಕರ ಸಾರಿಗೆ ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.