ನವದೆಹಲಿ, ಅ.22: ಇಸ್ರೇಲ್ ದಾಳಿಯಿಂದ ತೀವ್ರವಾಗಿ ನಲುಗಿರುವ ಪ್ಯಾಲಸ್ತೇನಿನ ಗಾಜಾಗೆ ಜಗತ್ತಿನಾದ್ಯಂತ ನೆರವಿನ ಮಹಾಪೂರ ಹರಿದು ಬರುತ್ತಿದೆ. ಭಾರತವು ಸಹ ಇಂದು ಮಾನವೀಯ ಆಧಾರದ ಮೇಲೆ ವೈದ್ಯಕೀಯ ಸಲಕರಣೆಗಳು ಮತ್ತು ವಿಪತ್ತು ಪರಿಹಾರ ವಸ್ತುಗಳನ್ನು ಕಳುಹಿಸಿಕೊಟ್ಟಿದೆ.
ಗಾಜಾವನ್ನು ಸಂಪೂರ್ಣ ವಶಕ್ಕೆ ಪಡೆದಿರುವುದಾಗಿ ಇಸ್ರೇಲ್ ಘೋಷಣೆ ಮಾಡಿದ್ದು, ನೀರು, ವಿದ್ಯುತ್, ಇಂಧನ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ದೀರ್ಘಕಾಲ ಕೊರತೆಯನ್ನು ಸೃಷ್ಟಿಸುತ್ತಿದೆ. ಇಸ್ರೇಲ್ ನಿಯಂತ್ರಣಕ್ಕೆ ಒಳಗಾಗದ ರಫಾ ಗಡಿ ಒಂದೇ ಗಾಜಾಗೆ ಇರುವ ಏಕೈಕ ಮಾರ್ಗವಾಗಿದೆ. ತಮ್ಮ ಮಿತ್ರ ದೇಶವಾಗಿರುವ ಯುನೈಟೆಡ್ ಸ್ಟೇಟ್ಸ್ ಮನವಿಯ ಮೇರೆಗೆ ಈಜಿಪ್ಟ್ನಿಂದ ಗಾಜಾಗೆ ನೆರವು ಸಾಗಿಸಲು ಇಸ್ರೇಲ್ ಅನುಮತಿಸಿದೆ. ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳು ರಫಾ ಗಡಿಯ ಮೂಲಕ ಗಾಜಾಗೆ ತಲುಪಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ವಿಷಯ ತಿಳಿಸಿದ್ದು, ಭಾರತದಿಂದ ಮಾನವೀಯ ಆಧಾರದ ಮೇಲೆ ಗಾಜಾಗೆ 6.5 ಟನ್ ವೈದ್ಯಕೀಯ ಸಲಕರಣೆಗಳು ಮತ್ತು 32 ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ ಎರಡು ವಾರಗಳನ್ನು ಪೂರೈಸಿ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಕದನ ಕಾರ್ಮೋಡ ಮಾತ್ರ ತಿಳಿಯಾಗಿಲ್ಲ. ಈಜಿಪ್ಟ್ನಲ್ಲಿ ನಡೆದ ಶಾಂತಿ ಶೃಂಗಸಭೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಮಾನವೀಯ ಕದನ ವಿರಾಮಕ್ಕಾಗಿ ಒತ್ತಾಯಿಸಿದ್ದಾರೆ. ಆದರೂ ಇಸ್ರೇಲ್ ಮಾತ್ರ ಗಾಜಾ ಮೇಲಿನ ತನ್ನ ದಾಳಿಯನ್ನು ಮಾತ್ರ ಮುಂದುವರಿಸಿದೆ.