ಸುದ್ದಿಮೂಲ ವಾರ್ತೆ
ಬೆಂಗಳೂರು,ಸೆ.6: ಭಾರತ ಹೆಸರು ಬದಲಾವಣೆ ಯಾವಾಗಲೋ ಆಗಬೇಕಿತ್ತು. ವಿದೇಶಿ ಪ್ರೇಮದ ಜನರು ಇದ್ದ ಕಾರಣ ಆ ‘ಇಂಡಿಯ’ ಶಬ್ದ ಬಂದಿದೆ ಎಂದು ಈ ಕುರಿತ ಪ್ರಶ್ನೆಗೆ ಪ್ರಶ್ನೆಗೆ ಡಿ.ವಿ.ಸದಾನಂದ ಗೌಡ
ನಗರದ ಕಾಡಮಲ್ಲೇಶ್ವರ ದೇವಸ್ಥಾನದಲ್ಲಿ ಇಂದು ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಭರತ ಭೂಮಿಯಲ್ಲಿ ನಾವು ಸ್ವಾತಂತ್ರ್ಯ ಪಡೆಯುವ ಹೊತ್ತಿನಲ್ಲೇ ಭಾರತ ಎಂಬ ಒಂದೇ ಹೆಸರನ್ನು ಈ ಭೂಮಿಗೆ ಇಡಬೇಕಾಗಿತ್ತು ಎಂದು ಹೇಳಿದರು.
ಇವತ್ತು ಭಾರತವು ಯಶಸ್ವಿ ದೇಶವಾಗಿದೆ. ದೇಶಕ್ಕೆ ನಮ್ಮ ಮಣ್ಣಿನ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಗಳ ಆಧರಿತ ಹೆಸರಿರಬೇಕು. ಗರಿಷ್ಠ ದೇಶಪ್ರೇಮ ಇರುವ ದೇಶ ಅತಿಹೆಚ್ಚು ಅಭಿವೃದ್ಧಿ ಕಾಣುತ್ತದೆ. ಇಸ್ರೇಲ್, ಜಪಾನ್ ಇದಕ್ಕೆ ಉದಾಹರಣೆ. ರಾಜಕೀಯ ಕಾರಣಕ್ಕಾಗಿ ಇಂಡಿಯ ಹೆಸರಿಗೆ ಪ್ರಾಮುಖ್ಯತೆ ನೀಡಿದ್ದು ದುರ್ದೈವ. ಇವತ್ತಾದರೂ ಒಳ್ಳೆಯ ದಿನ ಬಂದಿದೆ ಎಂದು ತಿಳಿಸಿದರು.
‘ನನ್ನ ಮಣ್ಣು ನನ್ನ ದೇಶ’:
‘ನನ್ನ ಮಣ್ಣು ನನ್ನ ದೇಶ’ ದೇಶಪ್ರೇಮ ಬಿಂಬಿಸುವ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕರೆಯ ಮೇರೆಗೆ ಪುಣ್ಯ ಭೂಮಿಯ ಮಣ್ಣು ಶೇಖರಿಸಿ ದೇಶದ ವೀರ ಯೋಧರ ಅಮೃತ ವಾಟಿಕಾ ವನದಲ್ಲಿ ಅದನ್ನು ಸೇರಿಸುವ ಸಂಕಲ್ಪದ ಪುಣ್ಯ ದಿನವಿದು ಎಂದರು.
ಕೆಂಪೇಗೌಡರ ಪ್ರತಿಮೆ ಅನಾವರಣದ ಸಂದರ್ಭದಲ್ಲೂ ಇಡೀ ರಾಜ್ಯದ ಎಲ್ಲ ಪುಣ್ಯ ಸ್ಥಳಗಳಿಂದ ಮಣ್ಣು ತರಲಾಗಿತ್ತು. ಇವತ್ತು ಇಡೀ ದೇಶದ ಕೆಲಸ ನಡೆದಿದೆ. ದೇಶದ ಪರಂಪರೆ, ಆಚಾರ, ವಿಚಾರಗಳನ್ನು ಕ್ರೋಡೀಕರಿಸುವ ಕಾರ್ಯ ನಡೆದಿದೆ. ದೇಶ ರಕ್ಷಿಸುವ ಸೈನಿಕರ ವನಕ್ಕೆ ಇಲ್ಲಿಂದ ಕೂಡ ಮಣ್ಣು ಕಳಿಸುವ ಕೆಲಸ ನಡೆಸಲಾಗುತ್ತಿದೆ. ಇದು ಇಡೀ ರಾಜ್ಯದಲ್ಲಿ ಅಕ್ಟೋಬರ್ 30ರವರೆಗೆ ಇದು ನಡೆಯಲಿದೆ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಮಾತನಾಡಿ, ನಾಡಿನ ಉದ್ದಗಲಕ್ಕೂ ಮಣ್ಣು ಸಂಗ್ರಹ ಕಾರ್ಯಕ್ರಮ ನಡೆದಿದೆ. ದೇಶದ ಪುಣ್ಯ ಭೂಮಿಯ ಮಣ್ಣಿಗೆ ಗೌರವ ಸಲ್ಲಿಸುವ ಅಭಿಯಾನ ಇದಾಗಿದೆ. ಭಾರತ ಒಂದು ಎಂಬ ಪರಿಕಲ್ಪನೆಯ ಕಾರ್ಯಕ್ರಮ ಇದು ಎಂದು ತಿಳಿಸಿದರು.
ಸಂಸದ ಪಿ.ಸಿ.ಮೋಹನ್, ಕಾರ್ಯಕ್ರಮದ ನೇತೃತ್ವ ವಹಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ನಗರ ಜಿಲ್ಲಾ ಅಧ್ಯಕ್ಷರು ಉಪಸ್ಥಿತರಿದ್ದರು.