ಸುದ್ದಿಮೂಲ ವಾರ್ತೆ
ಬೆಂಗಳೂರು ಗ್ರಾಮಾಂತರ, ಅ. 08 : ರಾಜ್ಯದ ಹಲವೆಡೆ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ, ಬ್ಯಾಡರಹಳ್ಳಿ, ಆವತಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಓಬದೇನಹಳ್ಳಿ, ಕೊಳೂರು, ಹೊನ್ನಾಘಟ್ಟ ಗ್ರಾಮಗಳಿಗೆ ತಂಡದ ಸದಸ್ಯರು ಭೇಟಿ ನೀಡಿ, ರೈತರು ಹಾಗೂ ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ಮಳೆ ಇಲ್ಲದೆ ರಾಗಿ ಮತ್ತು ಜೋಳದ ಬೆಳೆಗಳು ಹಾಳಾಗಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಅಂತರ್ಜಲ ಬತ್ತಿರುವುದರಿಂದ ಬಾವಿಗಳಲ್ಲಿ ನೀರಿಲ್ಲ ಎಂದು ರೈತರು ಸಮಸ್ಯೆ ವಿವರಿಸಿದರು.
ಕೇಂದ್ರ ಜಲ ಆಯೋಗದ ನಿರ್ದೇಶಕ ಅಶೋಕ್ ಕುಮಾರ್ ವಿ.ಎಂ.ಎನ್.ಸಿ.ಎಫ್.ಸಿ ಯ ಉಪನಿರ್ದೇಶಕ ಕರಣ್ ಚೌಧರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಸಂಗೀತ್ ಕುಮಾರ್, ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರರಾದ ಡಾ.ಜಿ.ಎಸ್ ಶ್ರೀನಿವಾಸ ರೆಡ್ಡಿ ತಂಡದಲ್ಲಿದ್ದರು. ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆಎನ್.ಅನುರಾಧ ತಂಡಕ್ಕೆ ಮಾಹಿತಿನೀಡಿದರು.