ಸುದ್ದಿಮೂಲ ವಾರ್ತೆ
ಅ.6:ಅಮೆರಿಕದ ಸೆಮಿಕಂಡಕ್ಟರ್ ಸಂಸ್ಥೆಯಾದ ಲ್ಯಾಮ್ ರಿಸರ್ಚ್ ಕರ್ನಾಟಕದಲ್ಲಿ ಪ್ರಯೋಗಾಲಯ ಸ್ಥಾಪಿಸುವ ಸಾಧ್ಯತೆಯಿದ್ದು, ಲಿಯೋ ಲ್ಯಾಬ್ಸ್ ಸಂಸ್ಥೆಯು ಬಾಹ್ಯಾಕಾಶ ಕ್ಷೇತ್ರದಲ್ಲಿ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರ ಆರಂಭಿಸುವ ಇಚ್ಛೆಯನ್ನು ಹೊಂದಿದೆ ಹಾಗೂ ಟಿಸೆಕೆಂಡ್ ಸಂಸ್ಥೆಯು ಬೆಂಗಳೂರಿನಲ್ಲಿ ಆರ್ ಅಂಡ್ ಡಿ ಕೇಂದ್ರದ ಸಾಮರ್ಥ್ಯದ ಬಗ್ಗೆ ಮಾತುಕತೆ ನಡೆಸಲಿದೆ.
ಅಮೆರಿಕ ಪ್ರವಾಸದಲ್ಲಿರುವ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಬೃಹತ್ ಕೈಗಾರಿಕೆಗಳ ಸಚಿವರಾದ ಎಂ.ಬಿ,ಪಾಟೀಲ ಅವರ ನೇತೃತ್ವದ ನಿಯೋಗವು ಇಂದು ಸ್ಯಾನ್ಫ್ರಾನ್ಸಿಸ್ಕೊ ನಗರದಲ್ಲಿ ನಡೆದ ನಾಲ್ಕು ಉನ್ನತ ಮಟ್ಟದ ಸಭೆಗಳಲ್ಲಿ ಪಾಲ್ಗೊಂಡು ಚರ್ಚೆ ನಡೆಸಿದವು.
ಲ್ಯಾಮ್ ಸಂಶೋಧನ ಸಂಸ್ಥೆ
ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಆರ್ ಅಂಡ್ ಡಿ ಪಾರ್ಕ್ನಲ್ಲಿ ಹೊಸ ಲ್ಯಾಬ್ ಸ್ಥಾಪಿಸಲು ಲ್ಯಾಮ್ ಸಂಶೋಧನ ಸಂಸ್ಥೆಯ ಸಂಭಾವ್ಯ ಹೂಡಿಕೆಯ ಮೇಲೆ ಮಾತುಕತೆಗಳು ಕೇಂದ್ರೀಕೃತವಾಗಿದ್ದವು.
2000ರಿಂದ ಬೆಂಗಳೂರಿನಲ್ಲಿ ನೆಲೆಗೊಂಡಿರುವ ಲ್ಯಾಮ್ ರಿಸರ್ಚ್ ಇಂಡಿಯಾ ಸಂಸ್ಥೆಯು ಸೆಮಿಕಂಡಕ್ಟರ್ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಪೂರೈಕೆದಾರ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕವನ್ನು ಸ್ಥಾಪಿಸುವ ಮೂಲಕ ಮುಂದಿನ ಪೀಳಿಗೆಯ ಎಂಜಿನಿಯರ್ಗಳಿಗೆ ತರಬೇತಿ ನೀಡಲು ಮತ್ತು ಭಾರತೀಯ ಪೂರೈಕೆದಾರರ ಅಭಿವೃದ್ಧಿಗೆ ಕೊಡುಗೆ ನೀಡಲು ಸಹಯೋಗದ ಅವಕಾಶವನ್ನು ಸಚಿವದ್ವಯರು ಚರ್ಚಿಸಿದರು.
ಲ್ಯಾಮ್ ಸಂಶೋಧನಾ ವಿಭಾಗದ ಕಾರ್ಯನಿರ್ವಾಹಕರಾದ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ವಲಯ ಜನರಲ್ ಮ್ಯಾನೇಜರ್ ರಂಗೇಶ್ ರಾಘವನ್, ಜಾಗತಿಕ ಉಪಾಧ್ಯಕ್ಷರಾದ ಕಾರ್ತಿಕ್ ರಾಮಮೋಹನ್, ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ಯಾಥ್ ಲಾರ್ಡ್ ಮತ್ತು ಸರ್ಕಾರಿ ವ್ಯವಹಾರಗಳ ನಿರ್ದೇಶಕರಾದ ವರ್ತನ್ ಜಿಹಾನಿಯನ್ ಚರ್ಚೆಯಲ್ಲಿ ಭಾಗವಹಿಸಿದ್ದರು.
ಲಿಯೋ ಲ್ಯಾಬ್ಸ್ ಸಂಸ್ಥೆ
ಬಾಹ್ಯಾಕಾಶ ಕ್ಷೇತ್ರದಲ್ಲಿ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರ ಆರಂಭಿಸುವ ಸಂಬಂಧ ಲಿಯೋ ಲ್ಯಾಬ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ ನಿಯೋಗವು ಸಹಯೋಗದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನ ಕೇಂದ್ರವನ್ನು ಸ್ಥಾಪಿಸುವ ಅವಕಾಶವನ್ನು ಪರಿಶೀಲಿಸಿದರು.
ಲಿಯೋ ಲ್ಯಾಬ್ಸ್ ಕಾರ್ಯನಿರ್ವಾಹಕರಾದ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡ್ಯಾನ್ ಸೆಪರ್ಲಿ ಮತ್ತು ಸಂಶೋಧನಾ ಮುಖ್ಯಸ್ಥ ರಚಿತ್ ಭಾಟಿಯಾ ಅವರೊಂದಿಗಿನ ಫಲಪ್ರದ ಮಾತುಕತೆಯಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ರಾಡಾರ್ಗಳನ್ನು ಸ್ಥಾಪಿಸಲು ಅನುಮೋದನೆ ನೀಡುವ ಬಗ್ಗೆ ಪ್ರಸ್ತಾಪ ಮಾಡಲಾಯಿತು.
ಟಿಸೆಕೆಂಡ್ ಸಂಸ್ಥೆ
ಬೆಂಗಳೂರಿನಲ್ಲಿ ಆರ್ ಅಂಡ್ ಡಿ ಕೇಂದ್ರ ಸ್ಥಾಪಿಸುವ ಸಂಬಂಧ ಟಿಸೆಕೆಂಡ್ ಸಂಸ್ಥೆಯೊಂದಿಗೆ ಚರ್ಚೆ ನಡೆಯಿತು. ಸಂವಾದದಲ್ಲಿ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿಲ್ ಚಾವ್ಲಾ ಇತರರು ಭಾಗವಹಿಸಿದ್ದರು. ಕರ್ನಾಟಕದಲ್ಲಿ ಜೋಡಣೆ ಮತ್ತು ಹಾರ್ಡ್ವೇರ್ ಉತ್ಪಾದನೆಯನ್ನು ಅನ್ವೇಷಿಸಲು ಹಾಗೂ ಇ-ಆಡಳಿತದಲ್ಲಿ ಸರ್ಕಾರದೊಂದಿಗೆ ಪಾಲುದಾರಿಕೆ ಮಾಡಲು ಟಿಸೆಕೆಂಡ್ ಉತ್ಸುಕತೆ ವ್ಯಕ್ತಪಡಿಸಿತು.