ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.6: ಕರ್ನಾಟಕ ರಾಜ್ಯಕ್ಕೆ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕ ಅನ್ಯಾಯ ಆಗಿದ್ದು, 16ನೇ ಹಣಕಾಸು ಆಯೋಗದಲ್ಲಿ ಅದನ್ನು ಸರಿದೂಗಿಸಲು ಮತ್ತು ಮುಂದೆ ಅನ್ಯಾಯ ಆಗದಂತೆ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನ ಪರಷತ್ತಿನಲ್ಲಿ ಜೆಡಿಎಸ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸದ ಮುಖ್ಯಮಂತ್ರಿಗಳು. 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ, 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ತೀವ್ರ ಅನ್ಯಾಯವಾಗಿದೆ. ಬೆಲೆ ಏರಿಕೆಗಳ ಮಧ್ಯೆ ಕರ್ನಾಟಕಕ್ಕೆ ಎಷ್ಟು ಹಂಚಿಕೆ ಆಗಬೇಕಿತ್ತೋ ಅಷ್ಟು ಆಗಿಲ್ಲ. 14ನೇ ಆಯೋಗದಲ್ಲಿ ಕರ್ನಾಟಕದ ಪಾಲು ಶೇ.4.71ರಷ್ಟಿದ್ದರೆ, 15ನೇ ಹಣಕಾಸು ಆಯೋಗದಲ್ಲಿ ಅದು ಶೇ 3.65ಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಿದರು.
15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಶಿಫಾರಸು ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರೇ ಕೇಂದ್ರ ಹಣಕಾಸು ಸಚಿವೆ ಆಗಿದ್ದರೂ ಕರ್ನಾಟಕ್ಕೆ ಅನ್ಯಾಯ ಮಾಡಲಾಯಿತು. ಈ ಹಿಂದಿನ ಸರ್ಕಾರಕ್ಕೆ ಇದನ್ನು ಹೇಳಿ ರಾಜ್ಯದ ಪಾಲು ಪಡೆಯಿರಿ ಎಂದು ಒತ್ತಾಯ ಮಾಡಿದರೂ ಸಹ ಅವರು ಆಸಕ್ತಿ ವಹಿಸಲಿಲ್ಲ ಎಂದರು.
ಜನಸಂಖ್ಯೆ ಆಧಾರದ ಮೇಲೆ ಉತ್ತರಪ್ರದೇಶ, ಬಿಹಾರಕ್ಕೆ ಹೆಚ್ಚಿನ ಪಾಲು ನೀಡಿ, ಆರ್ಥಿಕವಾಗಿ ಸಬಲೀಕರಣವಾಗಿ ಹೆಚ್ಚಿನ ತೆರಿಗೆ ಕಟ್ಟುವಂತಹ ಕರ್ನಾಟಕಕ್ಕೆ ಅನ್ಯಾಯ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಇದಲ್ಲದೆ, ನೇರ ತೆರಿಗೆ ಹಾಕಿದರೆ ರಾಜ್ಯಕ್ಕೂ ಪಾಲು ಕೊಡಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಕೆಲವು ಸೆಸ್ ಚಾರ್ಜ್ಗಳನ್ನು ಹಾಕಿ ಸಹ ಅನ್ಯಾಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರ.
16ನೇ ಹಣಕಾಸು ಆಯೋಗ ರಚನೆಗೆ ರಾಷ್ಟ್ರಪತಿಗಳು ಸೂಚಿಸಿದ್ದಾರೆ. ನೂತನ ಆಯೋಗದ ವಿಚಾರಣೆ ನಿಬಂಧನೆಗಳ ಬಗ್ಗೆ ರಾಜ್ಯ ಸರ್ಕಾರವು ಪ್ರಸ್ತಾವನೆಯನ್ನು ಸಿದ್ದಪಡಿಸುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದೆ. ರಾಜ್ಯದ ಹಿತಾಸಕ್ತಿ ಕಾಪಾಡುವ ಹಿತದೃಷ್ಟಿಯಿಂದ ಕೇಂದ್ರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಪಾಲನ್ನು ಪಡೆಯಲು ಪಕ್ಷಾತೀತವಾಗಿ ರಾಜ್ಯದ ಪರವಾಗಿ ಹೋರಾಟ ಮಾಡಬೇಕು. ಆಯೋಗದ ಮುಂದೆ ಸರ್ಕಾರ ಸಹ ಸಮರ್ಥವಾಗಿ ತನ್ನ ವಾದ ಮಂಡಿಸುವ ಮೂಲಕ ರಾಜ್ಯಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.