ಕೊಪ್ಪಳ: ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ಈಗ ನೀರು ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ರೈತರ ಭೂಮಿಗೆ ನೀರುಣಿಸಲು ಮೀನಾಮೇಷ ಮಾಡಲಾಗುತ್ತಿದೆ. ಆದರೆ ಇದೇ ವೇಳೆ ಆಂಧ್ರ ಪ್ರದೇಶವು ತನ್ನ ಪಾಲಿನ ನೀರನ್ನು ಕಾಲುವೆ ಮೂಲಕ ಹರಿಸಿಕೊಳ್ಳುತ್ತಿದೆ. ಕರ್ನಾಟಕದ ರೈತರು ಈಗ ಕಣ್ಣು ಕಣ್ಣು ಬಿಡುವಂತಾಗಿದೆ.
ಕರ್ನಾಟಕ, ಆಂಧ್ರ ಹಾಗು ತೆಲಂಗಾಣದ ಸುಮಾರು 11 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ತುಂಗಭದ್ರಾ ಜಲಾಶಯದಲ್ಲಿರುವ ನೀರಿನಲ್ಲಿ ಶೇ 30 ರಷ್ಟು ಪಾಲನ್ನು ಆಂಧ್ರ ಪ್ರದೇಶ ಹೊಂದಿದೆ. ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ತನ್ನ ಪಾಲಿನ ನೀರನ್ನು ಆಂಧ್ರ ಹಾಗು ತೆಲಂಗಾಣದವರು ಬಳಕೆ ಮಾಡುತ್ತಾರೆ. ಇದೇ ವೇಳೆ ಹೆಚ್ಚು ಪಾಲನ್ನು ಹೊಂದಿರುವ ಕರ್ನಾಟಕದ ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗು ರಾಯಚೂರು ಜಿಲ್ಲೆಯ ರೈತರು ಶೇ 70 ರಷ್ಟು ನೀರು ಬಳಕೆ ಮಾಡುವ ಅವಕಾಶ ಹೊಂದಿದೆ. ಆದರೆ ಈ ವರ್ಷ ಆಂಧ್ರ ಪ್ರದೇಶವು ತನ್ನ ಪಾಲಿನ ನೀರನ್ನು ಬಳಕೆ ಮಾಡಲು ನಾಲೆಗಳಿಂದ ನೀರು ಪಡೆಯುತ್ತಿದೆ. ಆದರೆ ಕರ್ನಾಟಕದ ನಾಲೆಗಳಿಗೆ ನೀರು ಹರಿಸಲು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳು ಮೀನಾಮೇಷ ಮಾಡುತ್ತಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಈಗ 71.987 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು 105.766 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿ ಈಗ ಜಲಾಶಯದ ಮುಕ್ಕಾಲು ಭಾಗ ನೀರು ತುಂಬಿದೆ. ಈ ವರ್ಷ ಮುಂಗಾರು ಆರಂಭವೇ ವಿಳಂಭವಾಗಿದ್ದು ಜುಲೈ ಎರಡನೆಯ ವಾರದವರೆಗೂ ಜಲಾಶಯದ ನೀರಿನ ಮಟ್ಟ ತಳಮಟ್ಟದಲ್ಲಿತ್ತು. ಆದರೆ ಕಳೆದ ಹದಿನೈದು ದಿನಗಳ ಕಾಲ ಮಲೆನಾಡು ಹಾಗು ಉತ್ತರ ಒಳನಾಡಿನಲ್ಲಿ ನಿರಂತರ ಮಳೆಯಿಂದಾಗಿ ಸುಮಾರು 68 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಳವಾದಂತೆ ಆಂಧ್ರ ಸರಕಾರವು ತನ್ನ ಪಾಲಿನ ನೀರನ್ನೆ ಹರಿಸಲು ತುಂಗಭದ್ರಾ ಮಂಡಳಿಗೆ ಕೇಳಿಕೊಂಡಿತ್ತು. ಅದರಂತೆ ತುಂಗಭದ್ರಾ ಮಂಡಳಿಯು ಆಂಧ್ರ ಪ್ರದೇಶಕ್ಕೆ ಬಲದಂಡೆ ಮೇಲ್ಮಟ್ಟ ಹಾಗು ಕೆಳಮಟ್ಟದ ಕಾಲುವೆಗಳಿಂದ ಸುಮಾರು 2000 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಬಲದಂಡೆ ಮೇಲ್ಮಟ್ಟದ ಕಾಲುವೆಗೆ 965 ಕ್ಯೂಸೆಕ್. ಬಲದಂಡೆ ಕೆಳಮಟ್ಟದ ಕಾಲುವೆ 950 ಕ್ಯೂಸೆಕ್ ನೀರನ್ನು ಜು 29 ರಿಂದ ಬಿಡಲಾಗುತ್ತಿದೆ.
ಇದೇ ವೇಳೆ ಕರ್ನಾಟಕದ ರೈತರು ಸಹ ಬೇಗನೆ ನಾಲೆಗಳಿಗೆ ನೀರು ನೀಡಿ. ವಿಳಂಭವಾದರೆ ಭತ್ತದ ಇಳುವರಿ ಕಡಿಮೆಯಾಗುತ್ತದೆ. ತಡವಾದರೆ ಭತ್ತ ಕಾಳುಕಟ್ಟುವ ಸಮಯದಲ್ಲಿ ಹವಾಮಾನ ವೈಪರಿತ್ಯದಿಂದ ಬೆಳೆಗೆ ರೋಗ ಬರುತ್ತದೆ. ಈ ಕಾರಣಕ್ಕೆ ಇದೇ ವಾರ ನಾಲೆಗಳಿಗೆ ನೀರು ಹರಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ರೈತರ ಒತ್ತಾಯವನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ.
ಕೊಪ್ಪಳ, ವಿಜಯನಗರ, ಬಳ್ಳಾರಿ ಹಾಗು ರಾಯಚೂರು ಜಿಲ್ಲೆಯ ಜನಪ್ರತಿನಿಧಿಗಳನ್ನೊಳಗೊಂಡು ತುಂಗಭದ್ರಾ ನೀರು ನಿರ್ವಹಣಾ ಸಲಹಾ ಸಮಿತಿ ರಚಿಸಬೇಕು. ನೂತನ ಸರಕಾರ ಬಂದ ನಂತರ ಐಸಿಸಿ ರಚನೆಯಾಗಿಲ್ಲ. ಐಸಿಸಿ ರಚನೆಯಾಗಿ ಸಭೆಯ ನಂತರ ನೀರು ಬಿಡಲಾಗುವುದು ಎಂದು ಕೆಲವು ಸಚಿವರು ಹೇಳುತ್ತಿದ್ದಾರೆ. ಈ ಮಧ್ಯೆ ರಾಯಚೂರು ಜಿಲ್ಲೆಯ ಸಚಿವರಾಗಿರುವ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜ್ ನಾಲೆಗೆ ನೀರು ಬಿಡಲು ಐಸಿಸಿ ಸಭೆ ನಡೆಸಲೇ ಬೇಕೆಂದೇನು ಇಲ್ಲ. ರೈತರಿಗೆ ಅವಶ್ಯವಾಗಿದ್ದರೆ ಐಸಿಸಿ ಸಭೆ ಇಲ್ಲದೆ ನೀರು ಬಿಡಬಹುದು ಇದೇ ವಾರ ನಾಲೆಗಳಿಗೆ ನೀರು ಬಿಡುತ್ತೇವೆ ಎಂದಿದ್ದರು.
ಈ ಮಧ್ಯೆ ಪ್ರತಿ ವರ್ಷದಂತೆ ಈ ವರ್ಷವೂ ನಾಲೆಗೆ ನೀರು ಬಿಡುವ ಸಮಯದಲ್ಲಿ ನಾಲೆಯ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುತ್ತಿದ್ದಾರೆ. ಕಾಮಗಾರಿ ನಡೆಯುತ್ತಿರುವಾಗಲೇ ನಾಲೆಗೆ ನೀರು ಬಿಡುವದರಿಂದ ನಾಲೆಯ ಕಾಮಗಾರಿ ಗುಣಮಟ್ಟ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಅದೇ ರೀತಿ ಈಗಲೂ ನಾಲೆಯ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಮುಗಿಯಲು ಇನ್ನೂ ಒಂದು ವಾರದ ಬೇಕು. ಆದರೆ ಇದನ್ನು ಹೇಳದೆ ಐಸಿಸಿ ಸಭೆಯಾಗಲಿ ಎಂಬ ನೆಪ ಮಾಡಿ ನೀರು ಹರಿಸಲು ಲೆಕ್ಕಾಚಾರ ಹಾಕುತ್ತಿದ್ದಾರೆ.
ಕರ್ನಾಟಕದ ಮೂಲಕವೇ ಆಂಧ್ರ ಪ್ರದೇಶಕ್ಕೆ ನಾಲೆಯ ಮೂಲಕ ನೀರು ಹರಿದು ಹೋಗುತ್ತಿದೆ. ಆದರೆ ಕರ್ನಾಟಕದ ರೈತರು ಈ ನೀರನ್ನು ನೋಡಿ ನಿರಾಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಐಸಿಸಿ ಸಭೆ ಇಲ್ಲದೆ ನಾಲೆಗಳಿಗೆ ನೀರು ಹರಿಸಲು ಸೂಚಿಸಬಹುದಾಗಿದೆ. ಈ ನಿಟ್ಟಿನಲ್ಲಿ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳು ಯತ್ನಿಸಿ ರೈತರಿಗೆ ನೀರು ನೀಡುತ್ತಾರೆಯೇ ಎಂಬುವದನ್ನು ಕಾದು ನೋಡಬೇಕು.