ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಸೆ. 9 : ತಾಲ್ಲೂಕಿನ ಜಿಲ್ಲಾಡಳಿತ ಭವನದಿಂದ ಪಟ್ಟಣದ ಹೊರ ವಲಯದಲ್ಲಿ ಸಾಗಿ ಹೊಸಕೋಟೆ ನಗರಕ್ಕೆ ಸಂಪರ್ಕ ಕಲ್ಪಿಸುವ ನೂತನ ಎಕ್ಸ್ ಪ್ರೆಸ್ ಹೈ ವೇ ರಾ.ಹೆ.648ರ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 37.6 ಕಿ.ಮೀ ನಷ್ಟು ದೂರದ ಆರು ಪಥದ ರಸ್ತೆ ಅನುಷ್ಠಾನಕ್ಕೆ ಸಿದ್ಧಗೊಳ್ಳುತ್ತಿರುವ ಬಗ್ಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೋಳಿ, ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರು ಶುಕ್ರವಾರ ಪರಿಶೀಲನೆ ನಡೆಸಿದರು.
ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿದ್ದ ಸಚಿವರು ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಷ್ಟ್ರೀಯ ಪ್ರಾಧಿಕಾರದ ಎಂಜಿನಿಯರ್ಗಳೊಂದಿಗೆ ರಸ್ತೆ ಕುರಿತಾದ ಸಮಗ್ರ ಮಾಹಿತಿ ಪಡೆದುಕೊಂಡು ಅಲ್ಲಿಂದ ನೂತನ ಹೆದ್ದಾರಿಯಲ್ಲಿ ಪರಿವೀಕ್ಷಣೆಗೆ ಹೊಸಕೋಟೆ ಮಾರ್ಗವಾಗಿ ಸಾಗಿದರು, ಸಾವಕನಹಳ್ಳಿ ಬಳಿ ಲೋಕೋಪಯೋಗಿ ಸಚಿವರ ನಿಯೋಗವನ್ನು ಭೇಟಿ ಮಾಡಿದ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.
ಬಿದಲೂರು ಗ್ರಾ.ಪಂ ಅಧ್ಯಕ್ಷ ಎಸ್.ಪಿ.ಮುನಿರಾಜು ಮಾತನಾಡಿ, ‘ನೂತನ ಹೆದ್ದಾರಿಗೆ ಸಾವಕನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸದೇ ಅನ್ಯಾಯ ಮಾಡಲಾಗಿದೆ. ರಸ್ತೆ ಕಾಮಗಾರಿಯಿಂದ ರಾಜಕಾಲುವೆ ಮುಚ್ಚಿ ಹೋಗಿದ್ದು, ಮಳೆ ನೀರು ಕೆರೆಯ ಒಡಲು ಸೇರದಂತಹ ಸ್ಥಿತಿ ನಿರ್ಮಾಣವಾಗಿದೆ. ಹೆದ್ದಾರಿ ಕಾಮಗಾರಿ ಪ್ರಾರಂಭಕ್ಕೂ ಮುನ್ನ ಇದ್ದ ನೀಲಿ ನಕ್ಷೆಯಂತೆ ರಸ್ತೆ ನಿರ್ಮಿಸಿಲ್ಲ ಎಂದು ಆರೋಪಿಸಿದರು.
ಇಲ್ಲಿ ಇರಬೇಕಿದ್ದ ಬಸ್ ತಂಗುದಾಣ, ಸರ್ವೀಸ್ ರಸ್ತೆಗಳು ವಾಸ್ತವದಲ್ಲಿ ಕಣ್ಮರೆಯಾಗಿದೆ. ಹೆದ್ದಾರಿಯಲ್ಲಿ ಸಾಗುವವರಿಗೆ ಕೇವಲ ಗ್ರಾಮಗಳ ಹೆಸರಿನ ನಾಮ ಫಲಕ ಮಾತ್ರವೇ ಕಾಣ ಸಿಗಲಿದ್ದು, ಅಲ್ಲಿಗೆ ಸಂಪರ್ಕಿಸುವ ರಸ್ತೆಯೇ ಇಲ್ಲದಂತಾಗಿದೆ. ರಸ್ತೆ ನಿರ್ಮಾಣಕ್ಕೆ ರೈತರ ಭೂಮಿ ಸ್ವಾಧೀನ ಮಾಡಿಕೊಂಡು ಇದೀಗಾ ಅವರ ಹೊಲಗಳಿಗೆ ಸಾಗದಂತಹ ಪರಿಸ್ಥಿತಿ ಇದೆ ಎಂದು ಸಮಸ್ಯೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿ ಹೋಳಿ, ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಸ್ಥಳೀಯರ ಸಮಸ್ಯೆ ಆಲಿಸಿದ್ದೇನೆ. ಇರುವ ಅವಕಾಶದಲ್ಲಿ ಸಾಧ್ಯವಾದಷ್ಟು ತೊಡಕುಗಳನ್ನು ನಿವಾರಣೆ ಮಾಡಿ ಅನುಕೂಲ ಮಾಡಿಕೊಡಲು ಸೂಚಿಸಲಾಗುವುದು ಎಂದರು.
ಇದೇ ವೇಳೆ ಬೆಂ. ಗ್ರಾಮಾಂತರ ಜಿಲ್ಲಾಧಿಕಾರ ಡಾ.ಶಿವಶಂಕರ ಎನ್, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ದೇವನಹಳ್ಳಿ ತಹಶೀಲ್ದಾರ್ ಶಿವರಾಜ್, ಕೆಪಿಸಿಸಿ ಸದಸ್ಯ ವಿ.ಶಾಂತ ಕುಮಾರ್, ಚಿನ್ನಪ್ಪ, ಬ್ಲಾಕ್ ಕಾಂಗ್ರಸ್ ಪ್ರಧಾನ ಕಾರ್ಯದರ್ಶಿ ಎಸ್.ನಾಗೇಗೌಡ, ಕುಂದಾಣದ ದೇವರಾಜ್ ಸೇರಿದಂತೆ ಇತರರು ಇದ್ದರು.