ಸುದ್ದಿಮೂಲ ವಾರ್ತೆ
ಮೈಸೂರು, ಆ.28: ಈ ವರ್ಷ ಏಕೋ ಏನೋ ಏನೋ ಮುಂಗಾರು ಮುನಿಸಿಕೊಂಡಿದೆ. ಪರಿಣಾಮ ರಾಜ್ಯದ ಜಲಾಶಯಗಳು ತುಂಬಿಲ್ಲ. ಹೋಗಲಿ. ಮುಂದಾದರೂ ಭರ್ತಿ ಆಗುವ ಲಕ್ಷಣಗಳು ಇವೆಯೇ ? ಇಲ್ಲವೇ ಇಲ್ಲ. ಕುಡಿಯುವ ನೀರಿಗೂ ತೊಂದರೆ ಆಗುವ ದುಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ವೇಳೆ ಕಾವೇರಿ ನೀರಿ ನಿರ್ವಹಣಾ ಪ್ರಾಧಿಕಾರ ಸೋಮವಾರ ಮತ್ತೆ ಇನ್ನೂ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿ ಎಂದು ಸೂಚನೆ ನೀಡಿರುವುದು ರಾಜ್ಯದ ಹಳೇ ಮೈಸೂರು ಭಾಗದ ರೈತರ ಪಾಲಿಗಂತೂ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈಗಾಗಲೇ ಕೆಆರ್ಎಸ್ ಮತ್ತು ಕಬಿನಿ ಜಲಾಶಯಗಳಿಂದ 15 ದಿನಗಳವರೆಗೆ ಪ್ರತಿದಿನ 10 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದೆ. ಅದರೂ ಮತ್ತೆ ಇನ್ನೈದು ದಿನಗಳವರೆಗೆ ನೀರು ಹರಿಸಿ ಎಂದು ಹೇಳಿರುವುದು ಸರ್ವತ ಸರಿಯಲ್ಲ. ಹೀಗೆ ರಾಜ್ಯದ ರೈತರ ಮೇಲೆ ಗದಾಪ್ರಹಾರ ನಡೆಸಲಾಗಿದೆ. ಇದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ತಮಿಳಯನಾಡು ಸರ್ಕಾರವಿರಲಿ, ಕೇಂದ್ರವೂ ಕೂಡ ಸಂಕಷ್ಟ ಸೂತ್ರಕ್ಕೆ ಕ್ಯಾರೆ ಎಂದಿಲ್ಲ. ಇನ್ನು ಮುಂದೆ ಆಗಬಹುದಾದ ಮಳೆಗಳಿಂದ ಕೆಆರ್ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳು ಭರ್ತಿ ಆಗುವುದೇ ಇಲ್ಲ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಕಾನೂನಾತ್ಮಕ ಹೋರಾಟವನ್ನು ಗಂಭೀರವಾಗಿ ಮುಂದಾಗಬೇಕು. ಇಲ್ಲದಿದ್ದರೆ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂಬ ಎಚ್ಚರಿಕೆಯ ಮಾತುಗಳು ಈಗ ಕೇಳಿ ಬರುತ್ತಿವೆ.
ಸಿದ್ದರಾಮಯ್ಯನವರು ಒಂದು ಸಾಲಿನ ನಿರ್ಣಯ ಮಾಡಿದ್ದರು:
2016—2017 ರಲ್ಲಿ ಇದೇ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಮಳೆ ಇಲ್ಲದೇ ತೊಂದರೆ ಉಂಟಾದಾಗ ಅಧಿವೇಶನ ಕರೆದು ʻತಮಿಳುನಾಡಿಗೆ ನೀರು ಕೊಡಲು ಸಾಧ್ಯವಿಲ್ಲʼ ಎಂದು ನಿರ್ಣಯ ಮಾಡಲಾಗಿತ್ತು. ಅದೇ ರೀತಿ ಈಗಲು ಮಾಡಿ ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರಬೇಕು. ಇದಕ್ಕೆ ಸರ್ವಪಕ್ಷಗಳು ಸಹಕಾರ ನೀಡಬೇಕು.
28 ಬಿಜೆಪಿ ಎಂಪಿಗಳು:
ರಾಜ್ಯದಲ್ಲಿ ಮಂಡ್ಯದಿಂದ ಪಕ್ಷೇತರರಾಗಿ ಗೆದ್ದಿರುವ ನಟಿ ಸುಮಲತಾ ಸೇರಿದಂತೆ ರಾಜ್ಯದಿಂದ 28 ಲೋಕಸಭಾ ಸದಸ್ಯರು ಬಿಜೆಪಿಯಿಂದ ಆಯ್ಕೆ ಆಗಿದ್ದಾರೆ. ಕೇಂದ್ರದಲ್ಲಿ ಆಧಿಕಾರದಲ್ಲಿ ತಮ್ಮದೇ ಸರ್ಕಾರ ಮೇಲೆ ಒತ್ತದ ಹೇರಿ ರಾಜ್ಯ ರೈತರ ಹಿತರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಅನ್ನದಾತರು ಮುಂದೆ ನಡೆಯುವ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ.
ಪ್ರಾಧಿಕಾರದ ಈಗಿನ ಸೂಚನೆಯಿಂದ ಕಾವೇರಿ ಜಲಾನಯನ ಪ್ರದೇಶದ ರೈತರು ಮತ್ತು ಜನರಿಗೆ ಆತಂಕ ಶುರುವಾಗಿದೆ. ಕಳೆದ ಶುಕ್ರವಾರ ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನೀರು ಬಿಡುವಂತೆ ಆದೇಶಿಸಲು ಸಾಧ್ಯವಿಲ್ಲ ಎಂದು ತಮಿಳುನಾಡಿಗೆ ಚಾಟಿ ಬೀಸಿತ್ತು. ಆದರೆ ಕೆಆರ್ಎಸ್ ಭರ್ತಿಯಾಗದಿದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಪ್ರಾಧಿಕಾರ ಸೂಚಿಸಿರುವುದು ರಾಜ್ಯದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.
ಕೋಟ್ಸ್…
ತುರ್ತು ಅಧಿವೇಶನ ಕರೆಯಲಿ
ಪ್ರಾಧಿಕಾರ ಮತ್ತೆ 5 ಸಾವಿರ ಕ್ಯುಸೆಕ್ ಬಿಡಬೇಕು ಎಂದು ಸೂಚಿಸಿರುವುದ ಆತಂಕಕಾರಿ ಸಂಗತಿ. ಕೂಡಲೇ ಮುಖ್ಯಮಂತ್ರಿಗಳು ತುರ್ತು ಅಧಿವೇಶನ ಕರೆದು ಚರ್ಚೆ ನಡೆಸಿ ಪರಿಹಾರ ಕಂಡು ಕೊಂಡು, ಹಿಂದೆ ಮುಖ್ಯಮಂತ್ರಿ ಆಗಿದ್ದ ಅವರೇ ಮಾಡಿದಂತೆ ಒಂದು ಸಾಲಿನ ನಿರ್ಣಯ ಮಾಡಬೇಕು. ಹಿಂದಿನಿಂದಲೂ ನಮ್ಮ ಸರ್ಕಾರ ಕಾನೂನಿನ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದು ಬೇಸರದ ಸಂಗತಿ.
– ಬಡಗಲಪುರ ನಾಗೇಂದ್ರ
ಅಧ್ಯಕ್ಷರು, ರಾಜ್ತ ರೈತ ಸಂಘ.
ಹೋರಾಟ ಅನಿವಾರ್ಯ
ಪ್ರಾಧಿಕಾರದ ನಿರ್ಧಾರ ರೈತರ ಪಾಲಿಗೆ ಆತಂಕವನ್ನು ಉಂಟು ಮಾಡಿದೆ. ಈಗ ಜಲಾಶಯಗಳಲ್ಲಿ ಲಭ್ಯವಿರುವ ನೀರು ಹಾಲಿ ಅಲ್ಪಕಾಲಿನ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಸಾಕಾಗುವುದಿಲ್ಲ. ಇಂತಹ ವೇಳೆ ಮತ್ತೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯುಸೆಕ್ ನೀರು ಬಿಡಲು ಹೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ. ರಾಜ್ಯ ರೈತರ ರಕ್ಷಣೆಗಾಗಿ ಹೋರಾಟ ಮಾಡಲಾಗುವುದು.
-ಕುರುಬೂರು ಶಾಂತಕುಮಾರ್ ಅಧ್ಯಕ್ಷರು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ