ಸುದ್ದಿಮೂಲ ವಾರ್ತೆ ಮಸ್ಕಿ, ಫೆ. 15:
ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಮಾನ ಮಾಡಿದ ಜೈನ್ ಕಾಲೇಜಿನ ಪ್ರಾಚಾರ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಸ್ಥಳೀಯ ತಹಶೀಲ್ದಾರ್ ಕಚೇರಿಯ ಸ್ಥಾನಿಕ ಅಧಿಕಾರಿ ಮೂಲಕ ಮನವಿ ಸಲ್ಲಿಸಿದ ಬಳಿಕ ದಲಿತ ವಿದ್ಯಾರ್ಥಿ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮೌನೇಶ ತುಗ್ಗಲದಿನ್ನಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್ ಬಗ್ಗೆ ಜಾತಿ ನಿಂದನೆ ಮಾಡುವ ಮೂಲಕ ಅವಮಾನ ಮಾಡಿದ್ದು ದೇಶಕ್ಕೆ ಮಾಡಿದ ಅವಮಾನ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರಿಗೆ ಮೇಲಿಂದ ಮೇಲೆ ಅವಮಾನ ಮಾಡುವ ಹೇಳಿಕೆಗಳು ನೀಡುತ್ತಿರುವುದು ಖಂಡನೀಯ. ಕೂಡಲೇ ಅವಮಾನ ಮಾಡಿದ ಪ್ರಾಚಾರ್ಯರು ಹಾಗೂ ವಿದ್ಯಾರ್ಥಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಸಂಘಟನೆ ಜಿಲ್ಲಾ ಸಂಚಾಲಕ ಮೌನೇಶ ಜಾಲವಾಡಗಿ, ಮುಖಂಡ ಹುಸೇನಪ್ಪ ಇರಕಲ್, ಚಿದಾನಂದ ಲಿಂಗಸುಗೂರು, ಶರಣಬಸವ ನಂಜಲದಿನ್ನಿ ಹಾಗೂ ಕಾರ್ಯಕರ್ತರು ಇದ್ದರು.