ಬೆಂಗಳೂರು, ಜೂ.7; ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಜೂನ್ 16 ರಿಂದ 18 ರ ವರೆಗೆ 4 ನೇ ಅಂತರರಾಷ್ಟ್ರೀಯ ಹಸಿರು ವಾಹನಗಳ ಪ್ರದರ್ಶನ ಏರ್ಪಡಿಸಲಾಗಿದೆ. ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್ ಪೋ ಸಹಯೋಗದೊಂದಿಗೆ ಕರ್ನಾಟಕ ನವೀಕೃತ ಇಂಧನ ಉತ್ಪಾದಕರ ಸಂಘ ಕ್ರೇಷ್ಮಾ ಮತ್ತು ಭಾರತದ ಪರಿಸರ ಸಂಶೋಧನಾ ಸಂಸ್ಥೆ ಪೆರ್ರಿ ಸಂಸ್ಥೆಯಿಂದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕ್ರೇಷ್ಮಾ ಅಧ್ಯಕ್ಷ ಕೆ.ಆರ್. ಸುಧೀಂದ್ರ ಕುಮಾರ್, ಕರ್ನಾಟಕ ಎಲೆಕ್ಟ್ರಿಕ್ ವಾಹನೋದ್ಯಮ ವಲಯದಲ್ಲಿ ಮಹತ್ವದ ಸಾಧನೆಯತ್ತ ದಾಪುಗಾಲಿಡುತ್ತಿದ್ದು, ಹಸಿರು ವಾಹನಗಳ ತಾಣವಾಗಿ ಹೊರ ಹೊಮುತ್ತಿದೆ. ಈ ಹಿನ್ನೆಲೆಯಲ್ಲಿ ರಿನೀವಬಲ್ ಎನರ್ಜಿ ಅಂಡ್ ಇವಿ ಅಸೋಸಿಯೇಷನ್ಸ್ ಮತ್ತು ಹಾಲಿಡೆ ಇನ್ ಎಕ್ಸ್ ಪ್ರೆಸ್ ಸಂಸ್ಥೆಗಳು 4 ನೇ ಆವೃತ್ತಿಯ ಗ್ರೀನ್ ವೆಹಿಕಲ್ ಎಕ್ಸ್ ಪೋ ಮತ್ತು ಇಂಡಿಯಾ ಗ್ರೀನ್ ಎಕ್ಸ್ ಪೋ ಪ್ರದರ್ಶನಕ್ಕೆ ಆತಿಥ್ಯ ಸಹಭಾಗಿತ್ವ ವಹಿಸಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 16 ರಂದು ಬೆಳಿಗ್ಗೆ ಮೇಳ ಉದ್ಘಾಟಿಸಲಿದ್ದಾರೆ. ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಎಫ್.ಕೆ.ಸಿ.ಸಿ.ಐ ಮತ್ತು ಕ್ರೇಷ್ಮಾ ಸಂಘಟನೆ, ಆಟೋಮೋಟಿವ್ ಒಕ್ಕೂಟ ಮತ್ತು ಕೈಗಾರಿಕಾ ಸದಸ್ಯರು ಸಹ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ದೇಶ – ವಿದೇಶಗಳ ಎಲೆಕ್ಟ್ರಿಕ್ ವಾಹನೋದ್ಯಮಗಳ ಗಣ್ಯರು ಭಾಗವಹಿಸಲಿದ್ದಾರೆ. ಮೇಳದಲ್ಲಿ ವಾಹನಗಳ ಟೆಸ್ಟ್ ಡ್ರೈವ್ ಗೆ ಅವಕಾಶವಿದ್ದು, ಸ್ಥಳದಲ್ಲಿ ಬುಕಿಂಗ್ ಮಾಡಿದರೆ ರಿಯಾಯಿತಿ ಸೌಲಭ್ಯ ದೊರೆಯಲಿದೆ ಎಂದರು.
ಪೆರ್ರಿ ಸಂಸ್ಥೆ ಅಧ್ಯಕ್ಷ ರಮೇಶ್ ಶಿವರಾಮ್ ಮಾತನಾಡಿ, ಮೇಳದಲ್ಲಿ ಪ್ ಬಸ್ ಗಳು, ಅತಿ ಸಣ್ಣ ಕಾರ್ ಗಳು, ಸೂಪರ್ ಬೈಕ್ ಗಳು, ಎಲೆಕ್ಟ್ರಿಕ್ ಅಂಡ್ ಹೈಬ್ರಿಡ್ ವಾಹನಗಳು, ಬೈಕ್ ಗಳು, ಸ್ಕೂಟರ್ ಗಳು, ಕಾರುಗಳು, ಎಲ್.ಸಿ.ವಿ ಮತ್ತು ಎಚ್.ಸಿ.ವಿ, ಸರಕು ಸಾಗಾಣೆ ವಾಹಗಳು, ಬ್ಯಾಟರಿ ಆಧಾರಿತ ವಾಹನಗಳು, ಬಿಡಿ ಭಾಗಗಳು, ಘಟಕಗಳು, ಬ್ಯಾಟರಿ, ಜಿಪಿಎಸ್ ವ್ಯವಸ್ಥೆ, ಒಇಎಂ ಪೂರೈಕೆ ಮತ್ತು ಸಂಬಂಧಿತ ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ. ಎಲೆಕ್ಟ್ರಿಕ್ ವಾಹನಗಳಿಗೆ ಸಂಬಂಧಿಸಿದ ಉತ್ಪಾದಕರು, ಅಭಿವೃದ್ದಿದಾರರು, ತಂತ್ರಜ್ಞಾನ ಪೂರೈಕೆದಾರರು, ವ್ಯಾಪಾರಿಗಳು ಮತ್ತು ಸಮಾಲೋಚಕರು ಒಳಗೊಂಡಂತೆ ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಗೆ ತರುವುದು ಈ ಪ್ರದರ್ಶನದ ಪ್ರಮುಖ ಉದ್ದೇಶವಾಗಿದೆ. ಸೌರ, ಪವನ, ಹೈಬ್ರಿಡ್ ಮತ್ತು ಜೈವಿಕ, ಇಂಗಾಲ ವಲಯದ ಪ್ರಮುಖರು ಪ್ರದರ್ಶನದಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.
ಮೀಡಿಯಾ ಡೇ ಮಾರ್ಕೆಂಟಿಂಗ್ ವಿಭಾಗದ ನಿರ್ದೇಶಕ ಮೊಹಮದ್ ಮುದಸಿರ್ ಮಾತನಾಡಿ, ಕರ್ನಾಟಕದಿಂದ 25ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸುತ್ತಿದ್ದು, ಜಗತ್ತಿನಲ್ಲಿ ಭಾರತ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನ ವಲಯವಾಗಿದೆ. 2022 ರಲ್ಲಿ ನವೀಕೃತ ಇಂಧನ ಸಾಮರ್ಥ್ಯ 175 ಗಿಗ್ಯಾವ್ಯಾಟ್ ನಷ್ಟಿದ್ದು, ಜಗತಿನಲ್ಲಿ 4 ನೇ ಸ್ಥಾನದಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನ ವರದಿಯಂತೆ ದೇಶದಲ್ಲಿ ಕರ್ನಾಟಕ ನವೀಕೃತ ಇಂಧನ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದ್ದು, 15,463 ಮೆಗಾವ್ಯಾಟ್ ನಷ್ಟಿದೆ. ತಮಿಳು ನಾಡು 15, 225, ಗುಜರಾತ್ 13,153 ಮತ್ತು ಮಹಾರಾಷ್ಟ್ರ 10,267 ಮೆಗಾವ್ಯಾಟ್ ಉತ್ಪಾದಿಸುತ್ತಿದೆ. ಪಳೆಯುಳಿಕೆ ಇಂಧನ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಮತ್ತು ಪರಿಸರ ಸಂರಕ್ಷಣೆಗಾಗಿ ನವೀಕೃತ ಇಂಧನಕ್ಕೆ ಉತ್ತೇಜನ ನೀಡುವ ಅಗತ್ಯವಿದೆ.
ಹೆಚ್ಚಿನ ಮಾಹಿತಿಗಾಗಿ www.greenvehicleexpo.com or Email: [email protected]
ಸುದ್ದಿಗೋಷ್ಠಿಯಲ್ಲಿ ಹೈದರಾಬಾದ್ ನ ಮಿಡಿಯಾ ಮಾರ್ಕೆಂಟಿಂಗ್ ನಿರ್ದೇಶಕ ರಾಮ್ ಸೋಂದಲ್ಕರ್ ಕ್ರೇಷ್ಮಾ ಕಾರ್ಯದರ್ಶಿ ಎ.ಸಿ. ಈಶ್ವರ್ ಉಪಸ್ಥಿತರಿದ್ದರು.