ಸುದ್ದಿಮೂಲ ವಾರ್ತೆ,
ಬಳ್ಳಾರಿ, ಏ. ೦೮:
ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಮತ್ತು ಹರಪನಹಳ್ಳಿ ಶಾಸಕ ಜಿ. ಕರುಣಾಕರರೆಡ್ಡಿ ಅವರಿಗೆ ಬಿಜೆಪಿ ಟಿಕೇಟ್ ಬಹುತೇಕ ಅಂತಿಮಗೊAಡಿದ್ದು, ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವುದೊಂದೇ ಬಾಕಿ ಇದೆ ಎಂದು ಹೇಳಲಾಗಿದೆ? ಬಳ್ಳಾರಿ ಮತ್ತು ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಕುರಿತು ಕಾಂಗ್ರೆಸ್ನಲ್ಲಿ ಇನ್ನೂ ಸ್ಪಷ್ಟತೆ ಮೂಡಿಲ್ಲ.
ಬಿಜೆಪಿ ಈ ಎರೆಡೂ ಕ್ಷೇತ್ರಗಳಲ್ಲಿ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಕಷ್ಟು ಪ್ರಯತ್ನಿಸಿತ್ತು. ಹಲವರು ಸ್ಪರ್ಧಿಸಲು ಆಸಕ್ತಿವಹಿಸಿ ಅರ್ಜಿಗಳನ್ನೂ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಪ್ರತಿ ಅಭ್ಯರ್ಥಿಯು ಬಿಜೆಪಿಗೆ ಸಲ್ಲಿಸಿದ ಸೇವೆ, ಜನರೊಂದಿಗಿನ ಸಂಪರ್ಕ, ಸಂಪನ್ಮೂಲಗಳ ಕ್ರೋಢೀಕರಣ ಇನ್ನಿತರೆ ವಿಷಯಗಳನ್ನು ತಮ್ಮದೇ ಆದ ಚೌಕಟ್ಟಿನಲ್ಲಿ ವಿಶ್ಲೇಷಣೆ ಮಾಡಿದ ಬಿಜೆಪಿ ಮುಖಂಡರು ಕೊನೆಯದಾಗಿ ರೆಡ್ಡಿ ಸಹೋದರರಿಗೆ ೨೦೨೩ರ ವಿಧಾನಸಭಾ ಚುನಾವಣೆಯಲ್ಲ `ಬಿ’ಫಾರಂ ನೀಡಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ, ಬಳ್ಳಾರಿ ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹಲವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಹಲವರು ಉತ್ತಮ ಜನಸಂಪರ್ಕ ಹೊಂದಿ ಜನಪ್ರಿಯರಾಗಿದ್ದರೂ ಚುನಾವಣಾ ವಿಚಾರಕ್ಕೆ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದ್ದರು. ಇನ್ನೂ ಹಲವರು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದರೂ ಜನಪ್ರಿಯತೆ, ಜನಬಳಕೆ, ಜನಸೇವೆ, ಪಕ್ಷಸೇವೆಗಳಿಂದ ದೂರವೇ ಇದ್ದರು. ಕಾರಣ ಈ ಎರಡೂ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೇ ಟಿಕೇಟ್ ನೀಡಲಾಗಿದೆ. ಈ ಇಬ್ಬರು ಹಾಲಿ ಶಾಸಕರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಜವಾಬ್ದಾರಿ ನೀಡಲಾಗಿದೆ ಎಂದು ಹೇಳಲಾಗಿದೆ.
`ಏಪ್ರಿಲ್ ೧೦ ರಂದು ಬಿಜೆಪಿ ಪಟ್ಟಿ ಪ್ರಕಟ’
ಬಿಜೆಪಿ ಅಭ್ಯರ್ಥಿಗಳ ಪಟ್ಟಿಯು ಏಪ್ರಿಲ್ ೧೦ರ ಸೋಮವಾರ ಪ್ರಕಟವಾಗುವ ಸಾಧ್ಯತೆಗಳಿವೆ. ಈ ಪಟ್ಟಿಯಲ್ಲಿ ಬಳ್ಳಾರಿ ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದೆ ಎಂದು ಹೇಳಲಾಗಿದೆ.
`ಕಾಂಗ್ರೆಸ್ನಲ್ಲಿ ಅಸ್ಪಷ್ಟ’
ಬಳ್ಳಾರಿ ಮತ್ತು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನು ಎದುರಿಸಲು `ಸಮರ್ಥ’ರನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸಲಿದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ. ಈ ಎರೆಡೂ ಕ್ಷೇತ್ರದಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷದಲ್ಲಿ ಈ ಕ್ಷಣದವರೆಗೂ ಸ್ಪಷ್ಟತೆ ಮೂಡಲ್ಲ.
ಕೆಆರ್ಪಿಪಿಯು ಬಳ್ಳಾರಿ ವಿಧಾನಸಭಾ ಕ್ಷೇತ್ರಕ್ಕೆ ಲಕ್ಷ್ಮೀ ಅರುಣ ಅವರನ್ನು ಕಣಕ್ಕಿಳಿಸಿದ್ದು, ಏಪ್ರಿಲ್ ೧೭ ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಜೆಡಿಎಸ್ ಮುನ್ನಾಭಾಯಿ, ಕೆಆರ್ಎಸ್ ಶ್ರೀನಿವಾಸರೆಡ್ಡಿ, ಎಪಿಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಹಲವರು ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ.