ಸುದ್ದಿಮೂಲ ವಾರ್ತೆ
ರಾಯಚೂರು,ಏ.02:- ದಿನದ 24 ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೇ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ರಕ್ಷಣೆ ಮತ್ತು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಯನ್ನು ಕಾಪಾಡುವಲ್ಲಿ ಪೊಲೀಸರ ಪಾತ್ರ ಅಪಾರವಾದದ್ದು, ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಪೊಲೀಸರಿಗೆ ಸಹಕಾರ ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಹೇಳಿದರು.
ಅವರು ಏ.02ರ(ಭಾನುವಾರ) ನಗರದ ಜಿಲ್ಲಾ ಪೊಲೀಸ್ ಕವಾಯತ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ದ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ವರದಿ ವಾಚನ ನೀಡಿ ಮಾತನಾಡಿದರು.
ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ದಿನವನ್ನು ಪ್ರತಿ ವರ್ಷ ಏಪ್ರಿಲ್ 2 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರುಗಳೂ ದಿನದ 24 ಗಂಟೆಗಳ ಕಾಲ ವಿಶ್ರಾಂತಿವಿಲ್ಲದೇ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಆಸ್ತಿ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ತೊಡಗಿರುವ ಅಂಶ ಎಲ್ಲರಿಗೂ ತಿಳದಿರುವ ವಿಷಯವಾಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ/ಸಿಬ್ಬಂದಿ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂಧಿಯವರುಗಳ ಕಲ್ಯಾಣವನ್ನು ಬಯಸಿ ಸಹಕಾರ ನೀಡುವುದು ಈ ಸಮಾಜದ ಕರ್ತವ್ಯವೆಂದು ಭಾವಿಸಲಾಗಿದೆ ಎಂದರು.
2022-23ನೇ ಸಾಲಿನ ಸಾಲಿನಲ್ಲಿ ಆರೋಗ್ಯಭಾಗ್ಯ ಯೋಜನೆ ಅಡಿಯಲ್ಲಿ ಒಟ್ಟು 150 ಜನ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಯವರುಗಳು ವೈದ್ಯಕಿಯ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. 2022-23 ನೇ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಯಿಂದ 38 ಜನ ನಿವೃತ್ತ ಸಿಬ್ಬಂದಿಯವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಒಟ್ಟು ರೂ. 4,94,900/-ಗಳನ್ನು ಪಾವತಿಸಲಾಗಿದೆ.
2022-23 ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಯಿಂದ 11 ಜನ ನಿವೃತ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳಿಗೆ ಶವಸಂಸ್ಕಾರಕ್ಕಾಗಿ ಒಟ್ಟು ರೂ 1,10,000/- ಗಳನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಒಂದು ನಿಧಿಯನ್ನು ಮಾಡಲಾಗಿದ್ದು, ಈ ನಿಧಿಗಾಗಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಪೊಲೀಸ್ ಸಿಬ್ಬಂದಿಯವರುಗಳಿಂದ ಮತ್ತು ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಉಪಯೋಗಿಸಲಾಗುತ್ತದೆ ಎಂದರು.
ಇದೇ ವೇಳೆ ನಿವೃತ್ತ ಆರ್.ಎಸ್.ಐ ಎಲ್.ಕೆ ಅಶೋಕ ಅವರು ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಯುವಕರು ಪೊಲೀಸ್ ಇಲಾಖೆಯಲ್ಲಿ ಸೇರ್ಪಡೆಯಾಗುತ್ತಿರುವುದು ಸಂತಸದ ವಿಚಾರವಾಗಿದ್ದು, ಯುವಕರು ದುಷ್ಚಟಗಳಿಗೆ ಬಲಿಯಾಗಬಾರದು ಮತ್ತು ಸಾರ್ವಜನಿಕರ ರಕ್ಷಣೆ ಸೇರಿದಂತೆ ತಮ್ಮ ಕುಟುಂಬದ ರಕ್ಷಣೆಯನ್ನೂ ಮಾಡಬೇಕೆಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಪೊಲೀಸರಿಗಾಗಿ ಹಲವು ಸೌಲಭ್ಯಗಳಿದ್ದು ಅವುಗಳನ್ನು ಸದುಪಯೋಗ ಪಡೆದುಕೊಳ್ಳುವ ಮೂಲಕ ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಡುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಪೊಲೀಸರಿಂದ ವಿಶೇಷ ಕವಾಯತು(ಪರೇಡ್) ಮಾಡಲಾಯಿತು. ನಂತರ ರಾಷ್ಟ್ರ ಧ್ವಜ ಮತ್ತು ಪೊಲೀಸ್ ಧ್ವಜ ಆಗಮಮ ಕಾರ್ಯಕ್ರಮ ಜರುಗಿತು. ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಎಸ್.ಪಿ ನಿಖಿಲ್ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಶಿವುಕುಮಾರ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.