ಸುದ್ದಿಮೂಲ ವಾರ್ತೆ
ಹೊಸಕೋಟೆ, ಜು 6 : ರಾಜಕಾಲುವೆ, ಸರ್ಕಾರಿ ಸ್ವತ್ತು, ಗೋಮಾಳ ಜಮೀನುಗಳನ್ನು ಯಾರೇ ಒತ್ತುವರಿ
ಮಾಡಿಕೊಂಡಿದ್ದರೂ ತಪ್ಪೇ. ಅಂತಹ ಒತ್ತುವರಿ ತೆರವುಗೊಳಿಸಬೇಕು. ಆದರೆ, ರಾಜಕೀಯ ದುರುದ್ದೇಶದಿಂದ ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಏಕಾಏಕಿ ಒತ್ತುವರಿಯನ್ನು ತೆರವುಗೊಳಿಸಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ
ನಗರದ ಕುವೆಂಪು ನಗರದಲ್ಲಿ ಚೌಡೇಗೌಡ ಎಂಬುವವರು ರಾಜಕಾಲುವೆ ಒತ್ತುವರಿ ಮಾಡಿದ್ದಾರೆಂದು ತೆರವು ಹಾಗೂ ಪುಟ್ ಪಾತ್ ನಲ್ಲಿ ಅಂಗಡಿ ಮುಂಗಟ್ಟುಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ಬಡವರ ಅಂಗಡಿಗಳನ್ನು ತೆರವು ಮಾಡಿದ ಹಿನ್ನೆಲೆ ಶಾಸಕ ಶರತ್ ವಿರುದ್ದ ವಾಗ್ದಳಿ ಮಾಡಿದರು.
ಕಾನೂನಿನ ಪ್ರಕಾರ ಒತ್ತುವರಿ ತೆರವುಗೊಳಿಸುವಂತೆ ಒತ್ತುವರಿದಾರರಿಗೆ ಒಂದು ವಾರದ ಮೊದಲೇ ನೋಟೀಸ್ ನೀಡಿ ತದ ನಂತರ ಒತ್ತುವರಿ ತೆರವುಗೊಳಿಸಬೇಕಾಗಿತ್ತು. ಆದರೆ, ದಿಡೀರ್ ಎಂದು ಒತ್ತುವರಿ ತೆರವುಗೊಳಿಸಿರುವುದರ ಹಿಂದೆ ರಾಜಕೀಯ ದುರುದ್ದೇಶವಲ್ಲದೆ ಮತ್ತೇನಿರಲು ಸಾಧ್ಯ.
ಕೆಲವರು ಒತ್ತುವರಿ ಮಾಡಿಕೊಂಡು ಬೇರೆ ಬೇರೆ ಉದ್ದೇಶಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕಾನೂನಿನ
ಪ್ರಕಾರ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಅದರ ಮೇಲೆ ಮನೆ ಕಟ್ಟಿಕೊಂಡಿರುವ ಎಲ್ಲರ ಒತ್ತುವರಿಯನ್ನು ತೆರವುಗೊಳಿಸಬೇಕಾಗಿತ್ತು. ರಾಜ ಕಾಲುವೆ ಎಲ್ಲೆಲ್ಲಿ ಹಾದು ಹೋಗಿದೆ ಒತ್ತುವರಿ ಮಾಡಿಕೊಂಡು ಯಾರ್ಯಾರು ಮನೆ ಕಟ್ಟಿಕೊಂಡಿದ್ದಾರೆಂಬ ಎಲ್ಲಾ ಮಾಹಿತಿಯು ಕಂದಾಯ ಇಲಾಖೆ ಹಾಗೂ ನಗರಸಭೆಯ ಅಧಿಕಾರಿಗಳಿಗೆ ಗೊತ್ತಿದೆ. ಆದರೆ, ಸ್ಥಳೀಯ ಶಾಸಕರು ರಾಜಕೀಯ ದುರುದ್ದೇಶದಿಂದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅಧಿಕಾರಿಗಳ ಮೇಲೆ ಒತ್ತಡ
ಹಾಕಿ ಒಬ್ಬರ ಒತ್ತುವರಿಯನ್ನು ತೆರವುಗೊಳಿಸಿರುವುದು ಸೇಡಿನ ಕ್ರಮ. ಎಂದರು.
ರಾಜಕೀಯ ದುರುದ್ದೇಶದಿಂದ ಇದೇ ರೀತಿ ತಾಲೂಕಿನಲ್ಲಿ ಸಾರ್ವಜನಿಕರಿಗೆ ರಾಜಕೀಯ ದುರುದ್ದೇಶದಿಂದ ತೊಂದರೆ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಂಟಿಬಿ ನಾಗರಾಜ್ಎಚ್ಚರಿಕೆ ನೀಡಿದರು.