ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.27: ಜೆಡಿಎಸ್ನಿಂದ ಅಲ್ಪಸಂಖ್ಯಾತ ನಾಯಕರು ದೂರ ಆಗುತ್ತಿದ್ದಾರೆ ಎಂಬುದು ಸರಿಯಲ್ಲ. ಇಂತಹ ಬೆಳವಣಿಗೆ ರಾಜಕೀಯದಲ್ಲಿ ನಡೆಯುತ್ತಿರುತ್ತದೆ. ಪಕ್ಷದ ರಾಜ್ಯಾಧ್ಯಕ ಸಿ.ಎಂ. ಇಬ್ರಾಹಿಂ ಅವರಿಗೂ ಈ ಎಲ್ಲ ವಿಚಾರಗಳನ್ನು ಆಯಾ ಕಾಲಕ್ಕೆ ಮಾಹಿತಿ ಕೊಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಗುಂಪು ಮಾಡಿಕೊಂಡು ಸಭೆ ಮಾಡಲು ಉದ್ದೇಶಿಸಿದ್ದಾರೆ. ಅವರಿಗೆ ನಾನು ಹೇಳುವುದು ಇಷ್ಟೇ, ನಾವೆಂದೂ ನಿಮಗೆ ಅಗೌರವ ತೋರಿಸಿಲ್ಲ. ಇದನ್ನು ಅರಿತುಕೊಳ್ಳಿ ಎಂದು ಮನವಿ ಮಾಡಿದರು.
ಮುಸ್ಲಿಮರ ಹಿತ ರಕ್ಷಣೆ ಎಂದಲ್ಲ. ಇಡೀ ನಾಡಿನ ಜನರ ರಕ್ಷಣೆ ಮಾಡುತ್ತೇವೆ. ಅದಕ್ಕಾಗಿಯೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪ್ರಬಲವಾಗಿದ್ದಿದ್ದರೆ ಅಲ್ಲಿಯೂ ನನಗೆ ಅಲ್ಪಸಂಖ್ಯಾತರ ಓಟ್ ಬರುತ್ತಿರಲಿಲ್ಲ. ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುತ್ತಿದ್ದರು. ಜೆಡಿಎಸ್ – ಬಿಜೆಪಿ ಫೈಟ್ ಇದ್ದ ಕಾರಣ ನನಗೆ ಓಟ್ ಬಂದಿದೆ ಎಂದು ಹೇಳಿದರು.
ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎನ್ನುವ ಕಾಂಗ್ರೆಸ್ನವರು ಯಾವ ಟೀಂ. ಅವರು ತಮಿಳುನಾಡಿನ ಟೀಮಾ ಅಥವಾ ಡಿಎಂಕೆಯ ಬಿ ಟೀಮಾ? ಎಂದು ಲೇವಡಿ ಮಾಡಿದ ಅವರು, ಬಿಜೆಪಿ ಜತೆ ಅಧಿಕಾರ ಅನುಭವಿಸಿದ ಪಕ್ಷಗಳ ಜತೆ ಸಖ್ಯ ಬೆಳೆಸಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಬಿ ಟೀಂ, ಎ ಟೀಂ ಎಂದು ಮಾತನಾಡುವ ನೈತಿಕತೆ ಇದೆಯೇ ಎಂದು ಹರಿಹಾಯ್ದರು.
ಅಂದು ಗುಲಾಂ ನಭಿ ಅಜಾದ್, ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಸಿದ್ದರಾಮಯ್ಯ ಕೂಡ ಇದ್ದರು. ಕುಮಾರಸ್ವಾಮಿಗೆ ಸಿಎಂ ಸ್ಥಾನ ಬೇಡ, ನಿಮ್ಮಲ್ಲೇ ಒಬ್ಬರು ಸಿಎಂ ಆಗಿ ಎಂದರು ದೇವೇಗೌಡರು. ಆದರೆ ಕೇಂದ್ರದ ನಾಯಕರು ಕುಮಾರಸ್ವಾಮಿ ಅವರೇ ಸಿಎಂ ಆಗಬೇಕು. ಆ ದಿನಗಳು ಕಾಂಗ್ರೆಸ್ ಪಕ್ಷಕ್ಕೆ ನೆನಪಿಲ್ಲವೇ? ಆಗ ಬಿಜೆಪಿ ಬಿ ಟೀಂ ಎಂಬುದು ಅರಿವಿಗೆ ಬರಲಿಲ್ಲವೇ ಎಂದರು.
ಆ ದಿನವೇ ಅಮಿತ್ ಶಾ ಅವರಿಂದ ನನಗೆ ಕರೆ ಬಂತು. ಅವತ್ತು ಬಿಜೆಪಿ ಜೊತೆ ಹೋಗಿದ್ದಿದ್ದರೆ ಐದು ವರ್ಷಗಳ ಕಾಲ ನಾನೇ ಸಿಎಂ ಆಗಿರುತ್ತಿದ್ದೆ. ಆದರೆ, ನಾನು ಹಾಗೆ ಮಾಡಲಿಲ್ಲ. ಈಗ ಸುಳ್ಳು ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇದೆಲ್ಲಾ ಗೊತ್ತಿಲ್ಲವೇ? ಎಂದು ಅವರು ಚಾಟಿ ಬೀಸಿದರು.
ಅಂದು ಸರಕಾರ ಬೀಳಿಸುವಾಗ ಬಿಜೆಪಿಯ 5 ಜನ ಶಾಸಕರು ಬೆಂಬಲ ಕೊಡಲು ಮುಂದಾಗಿದ್ದರು. ಆದರೆ 5 ಜನ ಬಿಜೆಪಿ ಶಾಸಕರು ಬಂದರೆ ಕಾಂಗ್ರೆಸ್ ನ ಇನ್ನೂ 5 ಜನರನ್ನು ಕಳುಹಿಸುತ್ತೇವೆ ಎಂದಿದ್ದರು ಒಬ್ಬರು. ಅವರು ಯಾರೂ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿದೆ. ಇವರು ಜಾತ್ಯತೀತತೆ ಬಗ್ಗೆ ಮಾತನಾಡುತ್ತಾರೆ. ನಾಚಿಕೆ ಆಗಬೇಕು ಇವರಿಗೆ ಎಂದು ಅವರು ಕಿಡಿಕಾರಿದರು.
2004ರಲ್ಲಿಯೇ ಜೆಡಿಎಸ್ ಮುಗಿಸಲು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಸಿದ್ದರಾಮಯ್ಯ ಆ ಪ್ರಯತ್ನ ಮಾಡಿದ್ದರು. ನಾಲ್ಕುಜನ ಸೇರಿ ಎಲ್ಲಿಗೆ ಹೋಗಿದ್ದರು ಎಂದು ಫ್ಲೈಟ್ ಟಿಕೆಟ್ ತೋರಿಸಬೇಕಾ? ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.