ಸುದ್ದಿಮೂಲ ವಾರ್ತೆ
ಹೊಸಕೋಟೆ, ನ.30: ಕನ್ನಡ ನಾಡಿನ ಸಾಂಸ್ಕೃತಿ ಪರಂಪರೆಯಲ್ಲಿ ಅಚ್ಚಳಿಯದ ಛಾಪು ಮೂಡಿಸಿದವರು ಕನಕದಾಸರು. ನಡುಗನ್ನಡ ಸಾಹಿತ್ಯದ ಪ್ರಮುಖ ಕೀರ್ತನೆಕಾರ, ಸಾಮಂತ, ಕವಿ, ಜ್ಞಾನಿ, ದಾರ್ಶನಿಕರಾಗಿ ನೀಡಿದ ಕೊಡುಗೆ ವರ್ಣಿಸಲಸಾಧ್ಯ. ‘ಕುಲಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ?’ ಎಂದು ವರ್ಗ ತಾರತಮ್ಯದ ವಿರುದ್ಧ ದನಿ ಶ್ರೇಷ್ಠ ಸಮಾಜ ಸುಧಾರಕರು ಎಂದು ನೆಲವಾಗಿಲು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಸಂತ ಲೋಕೇಶ್ ಹೇಳಿದರು.
ಅವರು ಹೊಸಕೋಟೆ ತಾಲೂಕಿನ ನೆಲವಾಗಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕದಲ್ಲಿ ದಾಸ ಪರಂಪರೆಗೆ ಸುಮಾರು 500 ವರ್ಷಗಳ ಭವ್ಯ ಇತಿಹಾಸವಿದೆ. ಕನಕದಾಸರು ಮತ್ತು ಪುರಂಧರದಾಸರಂತಹ ವೈಚಾರಿಕ ಸಂತರಿಂದಾಗಿ ಸಮಾಜದಲ್ಲಿ ಬೇರುಬಿಟ್ಟಿದ್ದ ಮೇಲು ಕೀಳು ಎಂಬ ಭಾವನೆ ಮತ್ತು ಜಾತಿ-ಮತಗಳ ಸಿದ್ಧಾಂತ ಪಕ್ಕಕ್ಕೆ ಸರಿದವು. ದೈವಸ್ತುತಿಯೇ ಪ್ರಮುಖವೆನಿಸಿದ ಭಕ್ತಿ ಪರಂಪರೆಯ ಕಾಲದಲ್ಲಿ ಧೃವತಾರೆಯಂತೆ ಅವತರಿಸಿದ ಕನಕದಾಸರು ತಮ್ಮ ವೈಚಾರಿಕ ಮತ್ತು ಪ್ರತಿಭಟನಾ ನೆಲೆಗಟ್ಟಿನಿಂದ ದಾಸಸಾಹಿತ್ಯಕ್ಕೆ, ತನ್ಮೂಲಕ ಕನ್ನಡ ಸಾಹಿತ್ಯಕ್ಕೆ ವೈಚಾರಿಕ ಪ್ರಭೆಯನ್ನು ನೀಡಿದ್ದಾರೆ ಎಂದರು.
ಕನಕರು ಆದಿಗುರು ಶ್ರೀ ಶ್ರೀ ಶಂಕರಾಚಾರ್ಯರು ಪ್ರತಿಪಾದಿಸಿರುವ ಆದೈತ ತತ್ತ್ವಸಾರವನ್ನನುಸರಿಸಿ ನಾನು,ನನ್ನದೆಂಬ ಮೋಹ, ಪರಬ್ರಹ್ಮ, ಬದುಕು, ಜೀವನಸಾರವನ್ನು ಬೋಧಿಸಿ ಮನುಜಕುಲ ಒಂದೆಂಬ ತತ್ತ್ವ ಸಾರಿದವರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಿಡಿಓ ಎ. ಮುನಿರಾಜು, ಕರ ವಸೂಲಿಗಾರ ರವಿಚಂದ್ರ, ಗಣಕಯಂತ್ರ ಆಪರೇಟರ್ ಎಂ. ಗಣೇಶ್, ಪಂಚಾಯತಿ ಸಿಬ್ಬಂದಿಗಳಾದ ಸುರೇಶ್ ಬಾಬು, ಮುನಿರಾಜು ಚೈತ್ರ, ರಾಜಣ್ಣ, ಪಿಳ್ಳಯ್ಯ, ರಾಮಚಂದ್ರ, ಚೌಡಪ್ಪ, ಅಮೀರ್ ಜಾನ್, ಮಂಜುನಾಥ್ಹಾಜರಿದ್ದರು.