ಚಿಂತಾಮಣಿ, ಅ. 4: ಶತಮಾನದ ಸಮಸ್ಯೆಯಾಗಿರುವ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿ ಶಾಶ್ವತ ಪರಿಹಾರ ನೀಡಬೇಕೆಂದು ತಾಲೂಕಿನ ಕರವೇ ಮುಖಂಡರು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಪ್ರಧಾನಿ ಮೋದಿ ಅವರ ಗಮನ ಸೆಳೆಯಲು ಯತ್ನಿಸಿದ್ದಾರೆ.
ಕರವೇ ನಾರಾಯಣಗೌಡ ಬಣದ ಜಿಲ್ಲಾಧ್ಯಕ್ಷ ಎಂ ಆರ್ ಲೋಕೇಶ್ ಮಾತನಾಡಿ, ಕಾವೇರಿ ನೀರಿನ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳು ಮಧ್ಯೆ ಪ್ರವೇಶಿಸುವಂತೆ ರಕ್ತ ಪತ್ರ ಹಮ್ಮಿಕೊಂಡಿರುವ ಚಳವಳಿಯಲ್ಲಿ, ಮಹಿಳೆಯರು, ಯುವಕರು ಪ್ರಧಾನಿಗೆ ರಕ್ತಪತ್ರವನ್ನು ಬರೆದು ಕಾವೇರಿ ವಿಚಾರದಲ್ಲಿ ಮಧ್ಯಸ್ತಿಕೆ ವಹಿಸಿ ಈ ಜಟಿಲ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು.
ಉಗಮಸ್ಥಾನದ ಕರ್ನಾಟಕಕ್ಕೆ ಅನ್ಯಾಯ
ಕಾವೇರಿ ನಮ್ಮದು ನೀರು ಹಂಚಿಕೆಯಲ್ಲಿ ತಾರತಮ್ಯವೇಕೆ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಹುಟ್ಟಿ ಹರಿಯುವ ಕಾವೇರಿ ನದಿ, ಸಮಯಕ್ಕೆ ಸರಿಯಾಗಿ ಮಳೆಯಾದರೆ ಸಮಸ್ಯೆ ಇರುವುದಿಲ್ಲ. ಆದರೆ, ವಾಡಿಕೆ ಗಿಂತ ಕಡಿಮೆ ಮಳೆಯಾದಾಗೆಲ್ಲ ತಮಿಳುನಾಡಿನಿಂದ ನಮಗೆ ಸಮಸ್ಯೆ ತಪ್ಪಿದ್ದಲ್ಲ ,ಆದ್ದರಿಂದ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿ ಸಂಕಷ್ಟ ಸಮಯದಲ್ಲಿ ಪರಿಹಾರ ಸೂತ್ರ ಜಾರಿಗೊಳಿಸಲು ಒತ್ತಾಯಿಸಿದರು.
ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ರಾಜ್ಯಾದ್ಯಂತ ಕರವೇ ಕಾರ್ಯಕರ್ತರಿಂದ ರಕ್ತದಲ್ಲಿ ಪತ್ರ ಬರೆಯುವ ಅಭಿಯಾನದ ಮೂಲಕ ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆಗೆ ಒತ್ತಾಯಿಸಲಾಗುವುದು. ಕರವೇ ಚಿಕ್ಕಬಳ್ಳಾಪುರ ಜಿಲ್ಲಾ ಘಟಕದಿಂದ ಚಿಂತಾಮಣಿ ನಗರದಲ್ಲಿ ರಕ್ತ ಪತ್ರ ರವಾನೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕರವೇ ಪದಾಧಿಕಾರಿಗಳಾದ ನಾರಾಯಣಸ್ವಾಮಿ, ವಿಜಿಕುಮಾರ್, ಸುಜಾತಮ್ಮ,ದೇವರಾಜ್, ಅಕ್ರಂವುಲ್ಲಾ, ಶಬ್ಬೀರ್ ಅಹಮ್ಮದ್, ರೂಪಾ, ಶ್ವೇತ, ವೆಂಕಟೇಶ್, ಬಾಬು ಫಕ್ರುದ್ದೀನ್, ರಾಮಕೃಷ್ಣಾರೆಡ್ಡಿ, ಶ್ರೀನಿವಾಸರೆಡ್ಡಿ ಮತ್ತಿತರರು ಹಾಜರಿದ್ದರು.