ಸುದ್ದಿಮೂಲ ವಾರ್ತೆ
ಮೈಸೂರು, ಜೂ. 25: ಹಲಸಿನಹಣ್ಣಿನಿಂದ ಮಾಡಿದ ಬಗೆ ಬಗೆಯ ತಿಂಡಿಗಳ ರುಚಿ, ಮತ್ತೊಂದು ಕಡೆ 25 ಮಾದರಿಯ ಹಲಸಿನ ತಳಿಗಳ ಹಣ್ಣುಗಳ ಪ್ರದರ್ಶನ. ಹೀಗೆ ಹಲಸಿನ ಮಯವಾಗಿತ್ತು ಮೈಸೂರಿನ ನಂಜರಾಜ ಬಹದ್ದೂರ್ ಛತ್ರ. ಹಲಸು ಹಣ್ಣಿನ ಮೇಳ ಜನ-ಮನವನ್ನು ಸೂಜಿಗಲ್ಲಿನಂತೆ ಸೆಳೆದಿತ್ತು.
ಐಸ್ ಕ್ರಿಂನಿಂದ ಮಾಡಿದ್ದ ಹಣ್ಣಿನ ಸವಿ. ಜತೆಗೆ ನಾನಾ ಬಗೆಯ ಖಾದ್ಯಗಳ ರುಚಿಯನ್ನು ಜನರು ಸವಿದರು. ಶನಿವಾರ ಹಲಸಿನ ಕಂಪು. ಇಡೀ ಸಭಾಂಗಣ ಹಲಸುಮಯವಾಗಿತ್ತು. ಸಹಜ ಸಮೃದ್ಧ ಬಳಗ ಹಾಗೂ ನಮ್ಮ ರೈತರ ಮಾರ್ಕೆಟ್ ನೇತೃತ್ವದಲ್ಲಿ ನಡೆದ ಎರಡು ದಿನಗಳ ಹಲಸಿನ ಹಬ್ಬವು ಹಲಸಿನ ಹೊಸ ಲೋಕವನ್ನೇ ತೆರೆದಿಟ್ಟಿತ್ತು.
ಇಡೀ ಮೇಳದಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿಯೂ ದೊರೆಯಿತು. ಜತೆಗೆ ಹಲಸು ಮಾರಾಟವೂ ಆಯಿತು. ಹಲಸಿನ ಹಣ್ಣಿನಲ್ಲಿ ಹಲವಾರು ತಳಿಗಳಿವೆ. ಅಂತಹ ತಳಿಗಳ ಬಗ್ಗೆ ಮಾಹಿತಿ ನೀಡಲು ಹಾಗೂ ಹಲಸನ್ನು ಉಳಿಸುವ ನಿಟ್ಟಿನಲ್ಲಿ ಈ ಮೇಳ ಆಯೋಜನೆ ಮಾಡಲಾಗಿತ್ತು. ಅನೇಕ ಸಹಜ ಕೃಷಿಕರು, ಕೃಷಿ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದರು.
ಘಮ್ಮೆಂದ ಹಲಸಿನ ಬಿರಿಯಾನಿ:
ಮೇಳದಲ್ಲಿ ಹಲಸಿನ ಕಾಯಿಯ ಬಿರಿಯಾನಿ ಗ್ರಾಹಕರನ್ನು ಆಕರ್ಷಿಸಿತು. ತೂಬಗೆರೆ, ರುದ್ರಾಕ್ಷಿ ಬಕ್ಕೆ, ಬೈರಸಂದ್ರ, ಲಾಲ್ಭಾಗ್ ಮದುರ ದಂತಹ ದೇಸಿ ತಳಿಗಳ ಜತೆಗೆ ಥಾಯ್ ರೆಡ್, ವಿಯೆಟ್ನಾಂ ಸೂಪರ್ ಹರ್ಲಿ ಸೇರಿದಂತೆ 25 ತಳಿಗಳ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸಸಿಗಳ ಬಗ್ಗೆ ಮಾಹಿತಿ ಪಡೆದ ಹಲವು ಜನ ಅವುಗಳನ್ನು ಖರೀದಿಸುವ ಮೂಲಕ ಹಲಸು ಹಬ್ಬದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
ನೈಸರ್ಗಿಕವಾಗಿ ಬೆಳೆದ ಮಾವು, ನೇರಳೆ, ಬೆಣ್ಣೆ ಹಣ್ಣು ಮತ್ತಿತರರ ಉತ್ಪನ್ನಗಳ ಮಾರಾಟ, ರೈತರಿಗೆ ಉಪಯೋಗ ಆಗುವ ಹಲಸು ಕತ್ತರಿಸುವ ಯಂತ್ರ, ಮಂಗಗಳಿಗೆ ಕಲ್ಲು ಹೊಡೆಯುವ ಕೋವಿ ಮೊದಲಾದ ಕೃಷಿ ಉತ್ಪನ್ನಗಳನ್ನೂ ಮಾರಾಟಕ್ಕೆ ಇಡಲಾಗಿತ್ತು.