ಸುದ್ದಿಮೂಲ ವಾರ್ತೆ
ಹುಬ್ಬಳ್ಳಿ, ಏ.12: ಉತ್ತರ ಕರ್ನಾಟಕ ಸಹಿತ ರಾಜ್ಯದಲ್ಲಿ 30 ವರ್ಷಗಳಿಂದ ಬಿಜೆಪಿ ಪಕ್ಷ ಕಟ್ಟಿದ್ದೇನೆ. ಈಗ ಇದ್ದಕ್ಕಿಂದ್ದಂತೆ ನಿಮಗೆ ಟಿಕೆಟ್ ಇಲ್ಲ ಎಂದು ಹೇಳಿದರೆ ಬೇಸರ ಆಗುವುದಿಲ್ಲವೇ? ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆಯಿಂದ ಹಿಂದೆ ಸರಿಯುವಂತೆ ಹೈಕಮಾಂಡ್ನಿಂದ ಕರೆ ಬಂದ ಬಳಿಕ ಹುಬ್ಬಳ್ಳಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಶೆಟ್ಟರ್, ತಮ್ಮದೇ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿ ಮಾತನಾಡಿದರು.
ಇಂದು ದೂರವಾಣಿ ಕರೆ ಮಾಡಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು. ತಾವು ಚುನಾವಣೆಯಿಂದ ಹಿಂದೆ ಸರಿಯಿರಿ ಎಂದು ಹೇಳಿದರು. ನಾನು ಸ್ಪರ್ಧೆ ಮಾಡಬಾರದು ಎಂಬುದಾಗಿದ್ದರೆ ಎರಡು-ಮೂರು ತಿಂಗಳ ಹಿಂದೆ ನನಗೆ ಹೇಳಬೇಕಿತ್ತು. ಯುವಕರಿಗೆ ಅವಕಾಶ ಮಾಡಿಕೊಡಿ. ನಿಮಗೆ ಬೇರೆ ಜವಾಬ್ದಾರಿ ನೀಡಲಾಗುವುದು ಎಂದು ಗೌರವಯುತವಾಗಿ ಮಾತನಾಡಬೇಕಿತ್ತು. ಆದರೆ, ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಒಂದೆರಡು ದಿನ ಬಾಕಿ ಇರುವಾಗ ಈ ರೀತಿ ಹೇಳುವುದು ಎಷ್ಟು ಸರಿ ಎಂದು ಶೆಟ್ಟರ್ ಕಿಡಿಕಾರಿದ್ದಾರೆ.
ನಾನು 30 ವರ್ಷ ಪಕ್ಷ ಕಟ್ಟಿದವರಿಗೆ ಹೀಗೆ ಹೇಳಿದ್ದು ಬೇಸರ ಉಂಟುಮಾಡಿತು. ಹಿರಿಯ ನಾಯಕರಿಗೆ ಗೌರವ ಕೊಡುವ ಕೆಲಸ ಆಗಬೇಕಿದೆ. ನೀವು ಹೇಳಿರುವುದು ನನಗೆ ಒಪ್ಪಿಗೆ ಇಲ್ಲ ಎಂದು ಹೈಕಮಾಂಡ್ಗೆ ತಿಳಿಸಿದ್ದೇನೆ ಎಂದು ಶೆಟ್ಟರ್ ಹೇಳಿದರು.
ನಿಮ್ಮ ಸಮೀಕ್ಷೆ ಪಾಸಿಟಿವ್ ಇದೆ ಎಂದು ಹಿರಿಯರು ಹೇಳಿದ್ದಾರೆ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಇಲ್ಲ. ಪಕ್ಷ ನಿಷ್ಠನಾಗಿ ಕೆಲಸ ಮಾಡಿದ್ದೇನೆ. ನಿಷ್ಠರಾದವರಿಗೆ ಗೌರವ ಇಲ್ಲ ಅಂತಾ ಬೇಜಾರಾಯಿತು. ವರಿಷ್ಟರು ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ವರಿಷ್ಠರು ನನಗೆ ಅವಕಾಶ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.
ನಾನು ಇನ್ನೂ ಆರೋಗ್ಯವಾಗಿ ಇದ್ದೇನೆ. ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಜನ ನನ್ನ ಬಯಸುತ್ತಿದ್ದಾರೆ. ರಾಜಕಾರಣದಲ್ಲಿ ನಾನು ಮುಂದುವರೆಯುತ್ತೇನೆ. ವರಿಷ್ಠರ ತೀರ್ಮಾನಕ್ಕೆ ಎರಡು ದಿನ ಕಾಯುತ್ತೇನೆ. ವ್ಯತಿರಿಕ್ತ ತೀರ್ಮಾನ ಬಂದರೆ ಮಾದ್ಯಮಗಳ ಎದುರು ಬರುತ್ತೇನೆ. ಇನ್ನೂ 15 ವರ್ಷ ನಾನು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ. ಹೈಕಮಾಂಡ್ ತೀರ್ಮಾನ ಏನೇ ಇದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಎಂದು ಶೆಟ್ಟರ್ ಹೇಳಿದರು.
ಶೆಟ್ಟರ್ ರಾಜೀನಾಮೆ ವದಂತಿ
ಜಗದೀಶ್ ಶೆಟ್ಟರ್ ಕೇಂದ್ರ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಅವರು ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ನಕಲಿ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶೆಟ್ಟರ್, ನಾನು ಬಿಜೆಪಿಗೆ ರಾಜೀನಾಮೆ ನೀಡಿಲ್ಲ. ನನ್ನ ಲೆಟರ್ಹೆಡ್ ಹೆಸರಿನಲ್ಲಿ ಕೆಲವರು ಅಪಪ್ರಚಾರ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.