ಸುದ್ದಿಮೂಲ ವಾರ್ತೆ
ಹುಬ್ಬಳ್ಳಿ, ಏ.24: ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರನ್ನು ಮಾಜಿ ಮುಖ್ಯಮಂತ್ರಿ ಮತ್ತು ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಜಗದೀಶ್ ಶೆಟ್ಟರ್ಗೆ ಉತ್ತರ ಕರ್ನಾಟಕದಲ್ಲಿ ಪ್ರವಾಸ ಮಾಡಿ ಲಿಂಗಾಯತ ಸಮುದಾಯದ ಬೆಂಬಲವನ್ನು ಪಡೆಯುವಂತೆ ರಾಹುಲ್ ಸಲಹೆ ನೀಡಿದ್ದಾರೆ.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಹುಲ್ ಗಾಂಧಿ ಅವರನ್ನು ಶೆಟ್ಟರ್ ಸ್ವಾಗತಿಸಿ ಕೆಲ ಕಾಲ ಮಾತುಕತೆ ನಡೆಸಿದರು. ಬಿಜೆಪಿಯೊಳಗೆ ನಡೆದಿರುವ ಲಿಂಗಾಯತರ ಕಡೆಗಣನೆ ಬಗ್ಗೆ ರಾಹುಲ್ ಜೊತೆ ಶೆಟ್ಟರ್ ಚರ್ಚೆ ಮಾಡಿದರು.
ಕಾಂಗ್ರೆಸ್ ಪಕ್ಷ ಬಸವ ತತ್ವಗಳ ಪರವಾಗಿದೆ. ಈ ಚುನಾವಣೆಯಲ್ಲಿ ಲಿಂಗಾಯತರ ದೊಡ್ಡ ಬೆಂಬಲ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿದೆ. 50ಕ್ಕೂ ಹೆಚ್ಚು ಲಿಂಗಾಯತ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಕೆಟ್ ನೀಡಲಾಗಿದೆ. ಬಸವ ತತ್ವ, ಬಸವಣ್ಣನವರ ವಿಚಾರಧಾರೆಗಳ ಬಗ್ಗೆ ಕಾಂಗ್ರೆಸ್ ಬಹಳ ನಂಬಿಕೆ ಇರುವಂತ ಪಕ್ಷ. ಶೆಟ್ಟರ್ ಅವರು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಮನವರಿಕೆ ಮಾಡಿಕೊಡಬೇಕು ಎಂದು ರಾಹುಲ್ ಸಲಹೆ ನೀಡಿದರು.
ಬಸವ ಧರ್ಮಕ್ಕೆ ಬಿಜೆಪಿ ವಿರೋಧವಾಗಿದ್ದರೂ ಸಹ ಲಿಂಗಾಯತರು ಯಾವ ಕಾರಣಕ್ಕಾಗಿ ಬಿಜೆಪಿಗೆ ಬೆಂಬಲಿಸುತ್ತಾರೆ? ಕೇವಲ ಯಡಿಯೂರಪ್ಪ ಅವರಿಗಾಗಿ ಈ ಬೆಂಬಲ ಇದೆಯೇ? ಅಥವಾ ಬೇರೆ ಕಾರಣಗಳು ಇವೆಯೇ? ಎಂದು ರಾಹುಲ್ ಶೆಟ್ಟರ್ ಬಳಿ ಕೇಳಿ ತಿಳಿದುಕೊಂಡಿದ್ದಾರೆ.
ಹಾನಗಲ್ನಲ್ಲಿ ನಡೆಯುವ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರೂ ಪಾಲ್ಗೊಳ್ಳಬೇಕು. ಅಲ್ಲದೆ, ಉತ್ತರ ಕರ್ನಾಟಕದ ವಿವಿಧೆಡೆ ನಡೆಯುವ ಪ್ರಚಾರ ಕಾರ್ಯಗಳಲ್ಲಿ ಶೆಟ್ಟರ್ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ರಾಹುಲ್ ಈ ವೇಳೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.