ಸುದ್ದಿಮೂಲ ವಾರ್ತೆ
ಮೈಸೂರು, ಏ.29: ಮತದಾನದ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಮುಖಂಡರು ಅಬ್ಬರದ
ಪ್ರಚಾರ ಮಾಡುತ್ತಿದ್ದು, ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ
ಮುಖಂಡರಲ್ಲದೆ ಚಿತ್ರನಟ ಜಗ್ಗೇಶ್ ಕೂಡ ಶನಿವಾರ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.
ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ
ಡಿ.ಕೆ.ಶಿವಕುಮಾರ್, ಹಾಸನದಲ್ಲಿ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಮತ್ತು ಮೈಸೂರಿನಲ್ಲಿ
ರಾಜ್ಯಸಭಾ ಸದಸ್ಯರಾದ ಚಿತ್ರನಟ ಜಗ್ಗೇಶ್ ಬಿರುಸಿನ ಪ್ರಚಾರ ಮಾಡಿ ಮತಯಾಚಿಸಿದರು.
ಮೋದಿ ಓದಲಿಕ್ಕೆ ಆಗುತ್ತಿರಲಿಲ್ಲ ಬಿಜೆಪಿ ರಾಜ್ಯ ಮತ್ತು ರಾಷ್ಟ್ರೀಯ ಮುಖಂಡರು ಪದೇ ಪದೇ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸಿದಾಗ ಕಾಂಗ್ರೆಸ್ ಸರ್ಕಾರ ಏನು ಮಾಡಲಿಲ್ಲ ಎಂದು ಆಧಾರರಹಿತವಾಗಿ ಟೀಕೆ
ಮಾಡುತ್ತಾರೆ. ಪಂಡಿತ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರು ರಾಜ್ಯ, ಜಿಲ್ಲೆ ಮತ್ತು
ಹೋಬಳಿ ಮಟ್ಟದಲ್ಲಿ ಶಾಲೆಗಳನ್ನು ತೆರೆಯದಿದ್ದರೆ ಪ್ರಧಾನಿ ಮೋದಿ ಅವರು ಶಿಕ್ಷಣ ಪಡೆಯಲಿಕ್ಕೆ
ಆಗುತ್ತಿರಲಿಲ್ಲ. 9 ವರ್ಷಗಳಿಂದ ದೇಶದ ಆಡಳಿತ ನಡೆಸುತ್ತಿರುವ ಮೋದಿ ಅವರು ಕಪ್ಪುಹಣ ಹೊರ
ತರಲಿಲ್ಲ ಬದಲಿಗೆ ಉದ್ಯಮಿಗಳ ಪರ ಆಡಳಿತ ನಡೆಸಿದರು ಎಂದು ವಾಕ್ಸಮರ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಮಾತನಾಡಿ, ಈ ಬಾರಿ ಮಂಡ್ಯ, ಹಾಸನ
ಜಿಲ್ಲೆಗಳಲ್ಲಿ ಪಕ್ಷದ ಅಧ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು. ಕಳೆದ ೫ ವರ್ಷದಿಂದ
ಬಿಜೆಪಿ ಆಡಳಿತ ನೋಡಿದ್ದೀರಿ. ಕಮಲ ಕೆರೆಯಲ್ಲಿ ಇದ್ದರೆ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ಧರ್ಮ, ದಾನ ಮಾಡುವವರು ಅಧಿಕಾರದಲ್ಲಿದ್ದರೆ ಚೆಂದ. ಹಾಗಾಗಿ ಕಾಂಗ್ರೆಸ್ ಅನ್ನು ಈ ಬಾರಿ ಅಧಿಕಾರಕ್ಕೆ ತನ್ನಿ ಎಂದು ಕರೆ ನೀಡಿದರು.
ಖರ್ಗೆ ನಿವೃತ್ತಿ ಹೊಂದಲಿ
ಹಾಸನ ಜಿಲ್ಲೆ ಹಳ್ಳಿ ಹೋಬಳಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಲೇ ರಾಜಕೀಯದಿಂದ ನಿವೃತ್ತಿ ಹೊಂದಬೇಕು. ಭಾರತವನ್ನು ಅಭಿವೃದ್ಧಿ ಪಥದಲ್ಲಿ ಸಾಗಿಸುತ್ತಿರುವ ಪ್ರಧಾನಿ ಮೋದಿ ಅವರನ್ನು ವಿಷ ಸರ್ಪ ಎಂದು ಕರೆದಿರುವುದು ಅಕ್ಷಮ್ಯ ಅಪರಾಧ. ಅವರು ರಾಜಕೀಯದಲ್ಲಿ ಮುಂದುವರಿಯುವುದು ಸರಿಯಲ್ಲ ಎಂದರು.
ಮಾಜಿ ಪ್ರಧಾನಿ ದೇವೇಗೌಡರದ್ದು ಕುಟುಂಬ ರಾಜಕಾರಣ ಮಿತಿಮೀರಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳನ್ನು ಕಿತ್ತೊಗೆಯಬೇಕು ಎಂದು ಟೀಕಿಸಿದರು.
ಸಿದ್ದರಾಮಯ್ಯ ಏನೇನು ಮಾಡಿಲ್ಲ
ಇನ್ನೂ ಚಿತ್ರನಟ ಜಗ್ಗೇಶ್ ಅವರು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣನವರ ಪರವಾಗಿ
ಕೆಂಪಯ್ಯನನುಂಡಿ ಹಾಗೂ ರಂಗಸಮುದ್ರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮತದಾರರನ್ನು ಭೇಟಿ
ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆವರು, ಸಿದ್ದರಾಮಯ್ಯನವರು ಈ ಕ್ಷೇತ್ರವನ್ನು ಪ್ರತಿನಿಧಿದ್ದು, ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವರುಣ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ರೀತಿಯ ಕಾರ್ಯವನ್ನು ಮಾಡದೆ ಇಡೀ ವರುಣ ವನ್ನು ಅನಾಥವನ್ನಾಗಿ ಮಾಡಿದ್ದಾರೆ ಯಾವುದೇ ಶಾಲಾ-ಕಾಲೇಜುಗಳು, ಸುಸಜ್ಜಿತ ಹಾಸ್ಪಿಟಲ್, ಕಾರ್ಖಾನೆಗಳು, ಸರ್ಕಾರಿ ಕಚೇರಿಗಳು ನಿರ್ಮಾಣ ಮಾಡಲು ಕೂಡ ಇವರಿಗೆ ಸಾಧ್ಯವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.