ಬಳ್ಳಾರಿ, ಜು. 14:
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತಾಶ್ರಮದ ಜೈನ ಮುನಿ 108 ಕಾಮಕುಮಾರ ನಂದೀ ಮಹಾರಾಜರ ಹತ್ಯೆಯ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಬಳ್ಳಾರಿಯ ಶ್ರೀ ಪಾಶ್ರ್ವನಾಥ ಜೈನ್ ಶ್ವೇತಾಂಬರ ದೇವಸ್ಥಾನದ ಅನುಯಾಯಿಗಳು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಶ್ರೀ ಪಾಶ್ರ್ವನಾಥ ಜೈನ್ ಶ್ವೇತಾಂಬರ ಸಂಘದ ಅಧ್ಯಕ್ಷ ಉತ್ಸವಲಾಲ್ ಬಾಗ್ರೇಚಾ, ಶ್ರೀ ದಿಗಂಬರ ಜೈನ
ಸಂಘದ ಅಧ್ಯಕ್ಷ ನಡುಮನಿ, ಶ್ರೀ ವರ್ಧಮಾನ್ ಸ್ಥಾನಕ್ ಜೈನ ಸಂಘದ ಅಧ್ಯಕ್ಷ ಕೇವಲಚಂದ್ ವಿನೈಕ್ಯ
ಮತ್ತು ಶ್ರೀ ಜೈನ ಶ್ವೇತಾಂಬರ ತೇರಾಪಂಥ್ ಸಭಾದ ಅಧ್ಯಕ್ಷ ಕಮಲ್ ಛಾಜೆಡ್ ಅವರು ಪ್ರತಿಭಟನೆಯ
ನೇತೃತ್ವವಹಿಸಿದ್ದು,
ಪ್ರಸ್ತುತ ದಿನಗಳಲ್ಲಿ ಮಠಮಾನ್ಯಗಳಿಗೆ ರಕ್ಷಣೆಯೇ ಇಲ್ಲವಾಗಿದೆ. ಸನ್ಯಾಸಿಯನ್ನು ಹೀನಾಯವಾಗಿ ಹಿಂಸಿಸಿ, ಸಾಯಿಸಿದ್ದೂ ಅಲ್ಲದೇ ತುಂಡರಿಸಿ ಅಮಾನವೀಯತೆಯ ಕ್ರೌರ್ಯವನ್ನು ದುಷ್ಕರ್ಮಿಗಳು ಪ್ರದರ್ಶನ ಮಾಡಿದ್ದು ಶಾಂತಿಪ್ರಿಯರಾದ ಜೈನರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಈ ಘಟನೆಯಿಂದಾಗಿ ಸಮಾಜ ತಲ್ಲಣಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಜೈನ ಮುನಿಗಳಿಗೆ ರಕ್ಷಣೆ ನೀಡುವುದರ ಜೊತೆಯಲ್ಲಿ ಎಲ್ಲಾ ಜಾತಿ, ವರ್ಗ, ಜನಾಂಗದ ಧರ್ಮಪ್ರಚಾರಕರಿಗೆ ಸರ್ಕಾರ ಸೂಕ್ತವಾದ ಭದ್ರತೆಯನ್ನು ನೀಡಬೇಕು. ಜೈನ ಅಶ್ರಮಗಳಿಗೆ ರಕ್ಷಣೆ ನೀಡಬೇಕು. ತಪ್ಪಿತಸ್ತರಿಗೆ ಕಠಿಣವಾದ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತೇರುಬೀದಿಯಲ್ಲಿರುವ ಜೈನ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ಜೈನ ಸನ್ಯಾಸಿಗಳು, ವಿವಿಧ ಜಾತಿ, ವರ್ಗ ಮತ್ತು ಪಂಗಡಗಳ ಮುಖಂಡರು ಪಾಲ್ಗೊಂಡು, ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.