ಸುದ್ದಿಮೂಲ ವಾರ್ತೆ
ಬೆಂಗಳೂರು, ನ. 08 :ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯವು ರಾಜ್ಯದ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ನ. 7 ರಿಂದ 9 ರವರೆಗೆ ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯದ ಅಮೃತ್ 20 ಯೋಜನೆಯಡಿ ಆಯ್ದ ನಗರ, ಸ್ಥಳೀಯ ಸಂಸ್ಥೆಗಳು ಮತ್ತು ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಹಯೋಗದೊಂದಿಗೆ ಸ್ವ-ಸಹಾಯ ಸಂಘದ ಮಹಿಳೆಯರನ್ನು ಗುರುತಿಸಿ “ಜಲ ದೀಪಾವಳಿ” – ಮಹಿಳೆಯರಿಗಾಗಿ ನೀರು, ನೀರಿಗಾಗಿ ಮಹಿಳೆಯರು ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಮೃತ್ ಯೋಜನೆಯಡಿ ನಗರ, ಸ್ಥಳಿಯ ಸಂಸ್ಥೆಗಳಲ್ಲಿರುವ ಜಲಶುದ್ದೀಕರಣ ಘಟಕಗಳಿಗೆ, ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿನ ಮಹಿಳಾ ಸ್ವ-ಸಹಾಯ ಗುಂಪುಗಳು ಭೇಟಿ ನೀಡಿ ಜಲಶುದ್ದೀಕರಣ ಘಟಕಗಳ ಮೂಲಕ ಮನೆಗಳಿಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಪೂರೈಕೆ ಪ್ರಕ್ರಿಯೆ, ಉತ್ತಮ ಗುಣಮಟ್ಟದ ನೀರನ್ನು ಪಡೆದುಕೊಳ್ಳಲು ಅನುಸರಿಸುವ ವಿವಿಧ ಪರೀಕ್ಷಾ ಮಾದರಿಯ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ತಿಳಿಸುವುದರ ಜೊತೆಗೆ ನೀರಿನ ಮೂಲ ಸೌಕರ್ಯದ ಬಗ್ಗೆ ಮಾಲಿಕತ್ವದ ಭಾವನೆಯನ್ನು ಮಹಿಳೆಯರ ನಡುವೆ ತರುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಲು, ನಗರ, ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು, ಸಮುದಾಯ ಸಂಘಟನಾಧಿಕಾರಿಗಳು ತಲಾ 30 ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರನ್ನು ಗುರುತಿಸಿ, ಅವರನ್ನು ಸ್ಥಳೀಯ ಜಲಶಯದ್ದೀಕರಣ ಘಟಕಗಳಿಗೆ ಭೇಟಿ ನೀಡಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜ್ಯದಲ್ಲಿ ಮೊದಲ ದಿನ ಮೈಸೂರು ಮಹಾನಗರ ಪಾಲಿಕೆ, ಹೊಸಪೇಟೆ, ಬಸವಕಲ್ಯಾಣ, ಚಡಚಣ, ಬೀಳಗಿ, ಜಮಖಂಡಿ, ಮದ್ದೂರು, ಬಂಕಾಪುರ, ಹಾನಗಲ್, ಶಿಗ್ಗಾಂವ್, ಸವಣೂರು, ಪಿರಿಯಾಪಟ್ಟಣ, ಟಿ. ನರಸೀಪುರ ಮತ್ತು ಅಳ್ನಾವರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಸಸ್ವಿಯಾಗಿ “ಜಲ ದೀಪಾವಳಿ” ಕಾರ್ಯಕ್ರಮವನ್ನು ಚಾಲನೆಗೊಳಿಸಿದರು ಎಂದು ಪೌರಾಡಳಿತ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.