ಬೆಂಗಳೂರು: ಜನಾರ್ದನ ರೆಡ್ಡಿ ಕೃಪಾಕಟಾಕ್ಷ ಇಲ್ಲದೆ ಗೆಲುವು ಸುಲಭವಲ್ಲ ಎಂಬುದು ರೆಡ್ಡಿ ಸಹೋದರರು ಮತ್ತು ಆಪ್ತ ಸ್ನೇಹಿತ ಶ್ರೀರಾಮುಲು ಸಹಿತ ಕಲ್ಯಾಣ ಕರ್ನಾಟಕ ಹಲವು ಕ್ಷೇತ್ರಗಳಲ್ಲಿ ಸಾಬೀತಾಗುತ್ತಿದೆ.
ಬಿಜೆಪಿಯಿಂದ ಅವಮಾನ ಅನುಭವಿಸಿ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ (ಕೆಆರ್ಪಿಪಿ) ಎಂಬ ಪಕ್ಷ ಸ್ಥಾಪಿಸಿರುವ ಜನಾರ್ದನ ರೆಡ್ಡಿ ಒಂಟಿಯಾಗಿಯೇ ರಾಜಕೀಯ ಚದುರಂಗದಾಟ ಆರಂಭಿಸಿದ್ದರು. ಅವರ ಪತ್ನಿ ಅರುಣಾ ಜನಾರ್ದನ ರೆಡ್ಡಿ ಅವರನ್ನು ಹೊರತುಪಡಿಸಿದರೆ 2008ರಿಂದ ಐದು ವರ್ಷಗಳ ಕಾಲ ಬಳ್ಳಾರಿಯನ್ನು ಆಳಿದಂತಹ ಅವರ ಬಂಟರ ಪಡೆಗಳೆಲ್ಲಾ ಕೈಕೊಟ್ಟಿದ್ದರು. ಒಬ್ಬರೇ ರಾಜಕೀಯದ ಚದುರಂದಾಟಕ್ಕೆ ರೆಡ್ಡಿ ಮುಂದಾಗಿದ್ದರು.
ಗಂಗಾವತಿಯಲ್ಲಿ ಜನಾರ್ದರೆಡ್ಡಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿಯ ಪರಣ್ಣ ಮುನವಳ್ಳಿ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನ ನಾರಾ ಭರತರೆಡ್ಡಿ ಮುಂದೆ ಇದ್ದರೆ ಎರಡನೇ ಸ್ಥಾನದಲ್ಲಿ ಜನಾರ್ದನ ರೆಡ್ಡಿ ಪತ್ನಿ ಅರುಣಾ ಜನಾರ್ದನ ರೆಡ್ಡಿ ಇದ್ದಾರೆ. ಮೂರನೇ ಸ್ಥಾನಕ್ಕೆ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಕುಸಿದಿದ್ದಾರೆ.
ಮತ್ತೊಂದೆಡೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿರುವ ಸಚಿವ, ಜನಾರ್ದನ ರೆಡ್ಡಿ ಆಪ್ತ ಸ್ನೇಹಿತ ಶ್ರೀರಾಮುಲು ಸತತ ಹಿನ್ನಡೆ ಅನುಭವಿಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಬಿ. ನಾಗೇಂದ್ರ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡೇ ಬರುತ್ತಿದ್ದಾರೆ. ರೆಡ್ಡಿ ಪಕ್ಷಕ್ಕೆ ಶ್ರೀರಾಮುಲು ಸೇರ್ಪಡೆ ಆಗಲಿಲ್ಲ, ಮತ್ತೊಂದೆಡೆ ಶ್ರೀರಾಮುಲು ಅವರಿಗೆ ರೆಡ್ಡಿ ಸಹಾಯವನ್ನೂ ಮಾಡಲಿಲ್ಲ ಎಂಬುದು ವಿಶೇಷ.
ಮತ್ತೊಂದೆಡೆ ಹರಪನಹಳ್ಳಿಯಲ್ಲಿ ಜನಾರ್ದನ ರೆಡ್ಡಿ ಮತ್ತೊಬ್ಬ ಸಹೋದರ ಕರುಣಾಕರ ರೆಡ್ಡಿ ಅವರೂ ಸಹ ಹಿನ್ನಡೆ ಅನುಭವಿಸುತ್ತಿದ್ದಾರೆ.
ಹೀಗೆ ರೆಡ್ಡಿ ಸಹೋದರರು ಮತ್ತು ಆಪ್ತ ಸ್ನೇಹಿತ ರೆಡ್ಡಿ ಸಹಾಯವಿಲ್ಲದೆ ಕಣಕ್ಕೆ ಇಳಿದವರು ಈಬಾರಿ ಹಿನ್ನಡೆ ಅನುಭವಿಸುತ್ತಿರುವುದು ನೋಡಿದರೆ ರೆಡ್ಡಿ ಇನ್ನೂ ತನ್ನ ಪ್ರಭಾವ ರಾಜಕೀಯದಲ್ಲಿ ಉಳಿಸಿಕೊಂಡಿದ್ದಾರೆ ಎಂಬುದರಲ್ಲಿ ಅನುಮಾನ ಕಾಡುತ್ತಿಲ್ಲ.