ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.3: ತಹಸೀಲ್ದಾರ್ ಅಜಿತ್ ರೈ ವಿರುದ್ಧ ಉನ್ನತ ತನಿಖೆ ನಡೆಸಬೇಕು ಎಂದು ಜನತಾ ರೈತ ಸಂಘಟನೆ ವತಿಯಿಂದ ಇಂದು ಕೆಆರ್ ಪುರ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಕೆಆರ್ ಪುರದಿಂದ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ಮೂಲಕ ಆಗಮಿಸಿದ ಜನತಾ ರೈತ ಸಂಘಟನೆಯ ಕಾರ್ಯಕರ್ತರು ತಹಸೀಲ್ದಾರ್ ಗೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ರಾಜ್ಯಾಧ್ಯಕ್ಷರಾದ ಆರ್.ಈರೇಗೌಡರು, ಭ್ರಷ್ಟ ಅಧಿಕಾರಿ ಅಜಿತ್ ರೈ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಯಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಭ್ರಷ್ಟ ಅಧಿಕಾರಿ ಇಷ್ಟೊಂದು ಅಕ್ರಮ ಮಾಡಲು ಯಾರು ಕಾರಣ ಅನ್ನೋದು ಬೆಳಕಿಗೆ ಬರಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಹಾಗು ಖಜಾಂಚಿ ಶ್ರೀನಿವಾಸ್ ಸುಬ್ಬು ಮಾತನಾಡಿ, ಅನುಕಂಪದ ಆಧಾರದಲ್ಲಿ ನೌಕರಿ ಪಡೆದು ಭಾರೀ ಭ್ರಷ್ಟಾಚಾರ ನಡೆಸಿರುವ ಅಜಿತ್ ರೈ ವಿರುದ್ದ ದೊಡ್ಡ ತನಿಖೆ ನಡೆಯಬೇಕು. ಈತನೊಬ್ಬನೇ ಅಲ್ಲದೆ ಇವರ ಹಿಂದೆ ಇರುವ ಅನೇಕರು ಬಯಲಿಗೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಜಿತ್ ರೈ ತಮ್ಮ ಅವಧಿಯಲ್ಲಿ ಅನೇಕ ಭೂಗಳ್ಳರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನೂರಾರು ರೈತರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋ ಆರೋಪವಿದ್ದು ಸರ್ಕಾರ ಎಲ್ಲ ದೃಷ್ಟಿಕೋನಗಳಲ್ಲಿ ತನಿಖೆ ನಡೆಸಲು ಆದೇಶಿಸಬೇಕು ಎಂದರು.
ಈ ವೇಳೆ ಯುವ ಘಟಕದ ಅಧ್ಯಕ್ಷ ಸತೀಶ್ ಗೌಡ, ಪ್ರಧಾನ ಕಾರ್ಯದರ್ಶಿ ಸತೀಶ್ ಎಂ. ಮಹಿಳಾ ಘಟಕದ ಉಷಾ ವಿಜಯ್ ಕುಮಾರ್, ರಾಧಾ, ಜಯಂತಿ ಬಾಲು, ಮಹೇಶ್ ಸಿಂಹ, ಕೃಪಾಕರರೆಡ್ಡಿ, ಮೂರ್ತಿ, ವೀರೇಶ್, ಪಾಲ್ ಜಯಪ್ರಕಾಶ್ ಹಾಗು ಇನ್ನಿತರರು ಉಪಸ್ಥಿತರಿದ್ದರು.