ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಮೇ 4: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ಚುನಾವಣೆ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಮತದಾರರು ಮೇ 10 ರಂದು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಟಗೊಳಿಸಲು ಸಹಕರಿಸಬೇಕೆಂದು ಚುನಾವಣಾ ಅಧಿಕಾರಿ ಜಾವೀದಾ ನಸೀಮಾ ಖಾನಂ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾನದ ಮಹತ್ವದ ಅರಿವು ಮತ್ತು ಜಾಗೃತಿ ಮೂಡಿಸಲಾಗಿದೆ ಜೊತೆಗೆ ಮತದಾರರನ್ನು ಮತಗಟ್ಟೆ ಕೇಂದ್ರಗಳತ್ತ ಆಕರ್ಷಿಸಲು ಮಹಿಳೆಯರಿಗಾಗಿ ಸಖಿ(ಪಿಂಕ್), ವಿಕಲಚೇತನರು ಮತ್ತು ಪಾರಂಪರಿಕ ಮತದಾನದ ಕೇಂದ್ರಗಳನ್ನು ಮಾದರಿಯಾಗಿ ಅಭಿವೃದ್ಧಿಗೊಳಿಸುವ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ಮನೆ ಬಾಗಿಲಿಗೆ ಮತದಾನ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿ ಅದರಲ್ಲಿ ಶೇಕಡ 97.06% ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ ಎಂದು ವಿವರಿಸಿದ ಅವರು ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ 447 ಮತ್ತು ವಿಶೇಷ ಚೇತನರ 166 ಸಂಖ್ಯೆ ಒಟ್ಟು 613 ಮತದಾರರಿಗೆ ಪೋಸ್ಟಲ್ ಮತಪತ್ರದ ಮೂಲಕ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ ಎಂದರು.
ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಅಧಿಕಾರಿಗಳು ಎಚ್ಚರದಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಅದರ ಜೊತೆಗೆ ಅಂತರ ಜಿಲ್ಲಾ ಮತ್ತು ಅಂತರ್ ರಾಜ್ಯ ಮಟ್ಟದ ವಾಹನಗಳ ಮೇಲೆ ಕಣ್ಣಿಡಲು ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೆಚ್ ಕ್ರಾಸ್ ಮತ್ತು ಕ್ಷೇತ್ರದ ಚಿಲಕಲನೇರ್ಪು ಹೋಬಳಿಯಲ್ಲಿ ಚೆಕ್ಪೋಸ್ಟ್ ತೆರೆದು ಎಲ್ಲಾ ವಾಹನಗಳ ತಪಾಸಣೆ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಡ್ಲಘಟ್ಟ ತಾಲೂಕಿನಲ್ಲಿ ಅತಿ ಹೆಚ್ಚಾಗಿ ಸ್ವೀಪ್ ಸಮಿತಿಯ ಮೂಲಕ ಮತದಾನದ ಮಹತ್ವದ ಕುರಿತು ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಗೊಳಿಸಲಾಗಿದೆ ಈ ಕಾರ್ಯವನ್ನು ಅತ್ಯುತ್ತಮವಾಗಿ ಮೂಡಿಬರಲು ಸಹಕರಿಸಿ ತಮಗೆಲ್ಲರಿಗೂ ಕೃತಜ್ಞತೆಗಳು ಸಲ್ಲಿಸುತ್ತೇನೆ ಎಂದ ಚುನಾವಣಾಧಿಕಾರಿಗಳು ಕ್ಷೇತ್ರದಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ನಾಗರಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಬಿ.ಎನ್.ಸ್ವಾಮಿ, ತಾಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಮುನಿರಾಜು, ನಗರಸಭೆಯ ಪೌರಾಯುಕ್ತ ಆರ್.ಶ್ರೀಕಾಂತ್, ಚುನಾವಣಾಧಿಕಾರಿಗಳ ಆಪ್ತ ಸಹಾಯಕ ಶ್ರೀನಿವಾಸ್ ಉಪಸ್ಥಿತರಿದ್ದರು.