ಸುದ್ದಿಮೂಲ ವಾರ್ತೆ
ಮೈಸೂರು, ಜು.12 : ಪಂಚಮಸಾಲಿ ಲಿಂಗಾಯತಗೌಡ ಒಳಗೊಂಡಂತೆ ಎಲ್ಲಾ ಲಿಂಗಾಯತ ಒಳ ಪಂಗಡಗಳನ್ನು ಕೇಂದ್ರದ ಒಬಿಸಿ ಮೀಸಲಾತಿ ಶಿಪಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲಿ ಮಾತನಾಡಿದ ಅವರು, 2ಎ ಮೀಸಲಾತಿಗಾಗಿ ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಈ ಹೋರಾಟದ ಪರಿಣಾಮ ಹಿಂದಿನ ಸರ್ಕಾರ 2ಡಿ ಮೀಸಲಾತಿಯನ್ನು ನೀಡಿತ್ತು. 2ಎ ಮೀಸಲಾತಿಗೆ ತಡೆಯಾಜ್ಞೆ ಇದ್ದ ಕಾರಣ 2ಡಿ ಮೀಸಲಾತಿ ನೀಡಲಾಯಿತು. ಈಗ 2ಡಿ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ ಎಂದರು.
ತಮ್ಮ ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ನೇಮಕಾತಿಯಲ್ಲಿ ಅವಕಾಶ ವಂಚಿತರಾಗಿದ್ದಾರೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಬಳಿ ನಮ್ಮ ಶಾಸಕರ ನಿಯೋಗ ಭೇಟಿಯಾಗಿ ನ್ಯಾಯ ದೊರಕಿಸಿ ಕೊಡಿ ಎಂದು ಕೋರಲಾಗಿದೆ. ಅಧಿವೇಶನ ಮುಗಿದ ಮೇಲೆ ಕಾನೂನು ತಜ್ಞರ ಸಭೆ ಕರೆದು ಸರ್ಕಾರದ ನಿಲುವನ್ನು ತಿಳಿಸುತ್ತೇವೆ ಎಂದು ಸಿಎಂ ಭರವಸೆ ನೀಡಿರುವುದಾಗಿ ತಿಳಿಸಿದರು.