ಸುದ್ದಿಮೂಲ ವಾರ್ತೆ
ಬೆಂಗಳೂರು ಅ.4: ಕುಂಚಿಟಿಗ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಕೈಗೊಳ್ಳಬೇಕಾಗಿರುವ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜಯಚಂದ್ರ ಅವರು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ತುಳಸಿ ಮದ್ದಿನೇನೆ ಹಾಗೂ ನಿವೃತ್ತ ಕಾರ್ಯದರ್ಶಿ ತಿಪ್ಪೇಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು .
ಕುಂಚಿಟಿಗ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ರಾಜ್ಯ ಸಚಿವ ಸಂಪುಟ ಸಭೆ ಈಗಾಗಲೇ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದ್ದು ಕೇಂದ್ರ ಸರ್ಕಾರಕ್ಕೆ ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದ ಮಾಹಿತಿಯನ್ನು ರವಾನಿಸಬೇಕು ಹಾಗೂ ಆದಷ್ಟು ಬೇಗ ಕೇಂದ್ರ ಸರ್ಕಾರ ಈ ವಿಷಯವನ್ನು ಸಚಿವ ಸಂಪುಟ ಸಭೆಯ ಮುಂದೆ ತಂದು ಕುಂಚಿಟಿಗ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅವರಿಗೆ ಜಯಚಂದ್ರ ಅವರು ಸೂಚಿಸಿದರು.
ತಾವು ಸಹ ದೆಹಲಿಗೆ ತೆರಳಿ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಈ ವಿಷಯವನ್ನು ಸಂಪುಟ ಸಭೆಯ ಮುಂದೆ ತರಲು ಒತ್ತಡ ಹೇರುವುದಾಗಿ ಜಯಚಂದ್ರ ಅವರು ಇದೇವೇಳೆ ತಿಳಿಸಿದರು .