ಸುದ್ದಿಮೂಲ ವಾರ್ತೆ
ರಾಮನಗರ,ಜೂ.20 : ಸಾಮಜಿಕ ಪರಿವರ್ತನೆ ಮತ್ತು ಜನರ ಬದುಕಿನ ಸುಧಾರಣೆ ಉದ್ದೇಶದೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಸ್ಥಾಪನೆಯಾಗಿದ್ದು, ಕಳೆದ 8 ವರ್ಷಗಳಿಂದ ರಾಮನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಟ್ರಸ್ಟ್ ನ ಮೈಸೂರು ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ತಿಳಿಸಿದರು.
ನಗರದಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಹಿಳೆಯರು, ದುರ್ಬಲ ವರ್ಗದವರಲ್ಲಿ ಆರ್ಥಿಕ ಶಿಸ್ತು ರೂಢಿಸಿ ಉಳಿತಾಯ ಮನೋಭಾವನೆಯನ್ನು ಬೆಳೆಸಲಾಗುತ್ತಿದೆ. ಜೊತೆಗೆ ವಿವಿಧ ಕಾರ್ಯಕ್ರಮಗಳ ಮೂಲಕ ಕೂಲಿ ಕಾರ್ಮಿಕರು, ಕೃಷಿಕರಿಗೂ ಟ್ರಸ್ಟ್ ವತಿಯಿಂದ ನೆರವು ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಇದುವರೆಗೂ 16,071 ಸ್ವ ಸಹಾಯ ಸಂಘಗಳನ್ನು ರಚನೆ ಮಾಡಲಾಗಿದೆ. ಈ ಸಂಘಗಳಲ್ಲಿ ಪ್ರಸ್ತುತ ವರ್ಷ 1.27 ಲಕ್ಷ ಸದಸ್ಯರಿದ್ದು ಈ ಸದಸ್ಯರು ಸುಮಾರು 60 ಕೋಟಿ ರೂ. ವರೆಗೆ ಉಳಿತಾಯ ಮಾಡಿದ್ದಾರೆ. ವಿವಿಧ ಬ್ಯಾಂಕುಗಳಲ್ಲಿ ಇವರ ಉಳಿತಾಯ ಇದೆ ಎಂದರು.
ಅಗತ್ಯ ಸಂದರ್ಭಗಳಲ್ಲಿ ಸಂಘದ ಸದಸ್ಯರಿಗೆ ನೇರ ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳಾದ ಯೂನಿಯನ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡದಿಂದ ಸಾಲದ ಸೌಲಭ್ಯ ಕೊಡಿಸಲಾಗುತ್ತಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಲು ಸಹಕಾರ ನೀಡಲಾಗುತ್ತಿದೆ. ಹೀಗೆ ಸಾಲ ಪಡೆದ ಸದಸ್ಯರು ವಾರದ ಕಂತಿನಲ್ಲಿ ಶೇ 100ರಷ್ಟು ಮರುಪಾವತಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರೈತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು, ಕೃಷಿ ಸಮಗ್ರ ಅಭಿವೃದ್ದಿಗೆ ಪೂರಕ ವಾತಾವರಣ ಸೃಷ್ಠಿಸಲು ಶ್ರಮಿಸಲಾಗುತ್ತಿದೆ. ನಿರ್ಗತಿಕರಿಗೆ ಮಾಸಿಕ 750 ರೂಗಳಿಂದ 5000 ರೂವರೆಗೆ ನೆರವು ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ನಿರ್ಗತಿಕರು, ಅಂಗವಿಕಲರು ಹಾಗೂ ಅನಾರೋಗ್ಯ ಪೀಡಿತರಾಗಿ ಜೀವನ ನಿರ್ವಹಣೆ ಮಾಡಲು ಕಷ್ಟ ಪಡುತ್ತಿರುವ ಕುಟುಂಬಗಳನ್ನು ಗುರುತಿಸಿ ಮಾಶಾಸನ ಕಾಠ್ಯಕ್ರಮದ ಮೂಲಕ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ಪರಿಣಾಮವಾಗಿ ಒಟ್ಟ 804 ಕುಟುಂಬಗಳು ಜಲಾವೃತಗೊಂಡಿತ್ತು., ಆ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ತಲಾ 1500 ರೂ ಮೊತ್ತದಂತೆ 12 ಲಕ್ಷ ರೂ ಮೌಲ್ಯದ ದಿನಬಳಕೆಯ ಸಾಮಾಗ್ರಿಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಜನಜಾಗೃತಿ ವೇದಿಕೆಯ ವಿವೇಕ್ ಪೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಜಯಕರ್ ಶೆಟ್ಟಿ, ಮುಖಂಡರಾದ ರೇಶ್ಮಾ, ಪುಷ್ಪ, ನಾಗವೇಣಿ, ನಾಗಭೂಷನ್, ಮುರಳೀಧರ್ ಇದ್ದರು.