ಚಿಂತಾಮಣಿ,ನ.10: ರಾಜ್ಯ ಸರ್ಕಾರ ಚಿಂತಾಮಣಿ ತಾಲೂಕನ್ನು ಬರಪೀಡತ ತಾಲೂಕೆಂದು ಘೋಷಣೆ ಮಾಡಿದ್ದು, ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ, ಸರಕಾರ ಮಾತ್ರ ಇದುವರೆಗೂ ಯಾವುದೇ ರೀತಿಯ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಮುಖ್ಯಮಂತ್ರಿ ಮತ್ತು ಸಚಿವರುಗಳು ತೆಲಂಗಾಣ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿರವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷದ ವರಿಷ್ಟರ ಆದೇಶದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ನೇತೃತ್ವದಲ್ಲಿ ಬರ ಅಧ್ಯಯನ ನಡೆಯುತ್ತಿದೆ. ಶುಕ್ರವಾರ ಚಿಂತಾಮಣಿಯ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿರವರ ನೇತೃತ್ವದಲ್ಲಿ ಶಿಡ್ಲಘಟ್ಟ ಹಾಲಿ ಶಾಸಕ ಬಿಎನ್ ರವಿಕುಮಾರ್, ಚಿಕ್ಕಬಳ್ಳಾಪುರ ಮಾಜಿ ಶಾಸಕ ಕೆಪಿ ಬಚ್ಚೇಗೌಡ,ಜೆಡಿಎಸ್ ಜಿಲ್ಲಾದ್ಯಕ್ಷ ಮುನೇಗೌಡ ಮತ್ತು ಜೆಡಿಎಸ್ ಪಕ್ಷದ ಮುಖಂಡರು ತಾಲೂಕಿನ ಶೆಟ್ಟಿಹಳ್ಳಿ, ಅನಕಲ್ಲು, ಕೋಟಗಲ್, ನೀಲಪಲ್ಲಿ, ಬೀರ್ಜೇನಹಳ್ಳಿ ಮತಿತ್ತರ ಗ್ರಾಮಗಳಲ್ಲಿನ ರೈತರ ಹೊಲಗಳಿಗೆ ಬೇಟಿ ನೀಡಿ ಮಳೆ ಇಲ್ಲದೆ ಬಾಡಿ ಹೋಗಿರುವ ರಾಗಿ, ಶೇಂಗಾ, ತೊಗರಿ, ಜೋಳ, ಆವರೆ ಮತಿತ್ತರ ಬೆಳೆಗಳನ್ನು ವಿಕ್ಷಣೆ ಮಾಡಿ, ರೈತರೊಂದಿಗೆ ಚರ್ಚೆ ನಡೆಸಿದರು.
ಈ ವೇಳೆ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಚಿಂತಾಮಣಿ ತಾಲೂಕಿನಲ್ಲಿ ಉತ್ತಮ ಮಳೆ ಇಲ್ಲದೆ ಬರ ಆವರಿಸಿ,ರೈತರು ಬೆಳೆದ ಬೆಳೆಗಳೆಲ್ಲಾ ಸುಟ್ಟು ಕರಕಲಾಗಿ ರೈತರು ಸಂಕಷ್ಟದಲ್ಲಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಚಿಂತಾಮಣಿ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಣೆ ಮಾಡಿರುವುದು ಸರಿಯಷ್ಟೆ. ಆದರೆ, ಇದುವರೆಗೂ ಬರ ಪರಿಹಾರಕ್ಕಾಗಿ ಯಾವುದೇ ರೀತಿಯ ಅನುದಾನ ಬೀಡುಗಡೆ ಮಾಡಿಲ್ಲ, ರೈತರು ಮಳೆ ಇಲ್ಲದೆ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದರೆ, ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರು ತೆಲಂಗಾಣ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಸರಕಾರದ ವಿರುದ್ದ ತಮ್ಮ ಆಕ್ರೋಶವ್ಯಕ್ತಪಡಿಸಿದ ಅವರು ನಮ್ಮ ಸಮಿತಿಯಿಂದ ಬರ ಅದ್ಯಯನ ನಡೆಸಿ ಸರಕಾರಕ್ಕೆ ಮನವಿ ಮಾಡುವುದೇನೆಂದರೆ ನಮ್ಮ ಸರಕಾರದ ಖಜಾನೆಯಿಂದ 17 ಸಾವಿರ ಕೋಟಿ ನಷ್ಟವಾಗಿದೆ ಎಂದು ಕೇಂದ್ರ ಸರಕಾರಕ್ಕೆ ಕಳುಹಿಸಿದ್ದು, 17 ಸಾವಿರ ಕೋಟಿಯಲ್ಲಿ ಮೊದಲ ಹಂತವಾಗಿ ಶೇ20ರಷ್ಟು ನಾಲ್ಕೂ ಸಾವಿರದ ಐನೂರು ಕೋಟಿ ಹಣ ಬಿಡುಗಡೆ ಮಾಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಇನ್ನೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನ. 15 ರಂದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಹಲವು ಶಾಸಕರು, ಮಾಜಿ ಶಾಸಕರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಹೇಳಿಕೆಗೆ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ದಿ ಮಾತನಾಡಿ ಡಿಕೆ ಶಿವಕುಮಾರ್ ರವರಿಗೆ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಪಡೆದುಕೊಂಡಿದ್ದರೂ ಕೂಡ ತೃಪ್ತಿಕಾಣುತ್ತಿಲ್ಲ, ಲೋಕಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೋಳಿ ರವರು 20 ಜನ ಶಾಸಕರನ್ನು ಪ್ರವಾಸ ಕರೆದುಕೊಂಡು ಹೋದರೆ ನಾನು ೪೦ಜನ ಶಾಸಕರನ್ನು ಕರೆದುಕೊಂಡು ಬರುತ್ತೇನೆ ಎಂದು ನೇರವಾಗಿ ಡಿಕೆ ಶಿವಕುಮಾರ್ ರವರು ಸತೀಶ್ ಜಾರಕಿಹೋಳಿ ರವರಿಗೆ ಪರೋಕ್ಷವಾಗಿ ಸಂದೇಶವನ್ನ ನೀಡಿದ್ದಾರೆ ಎಂದರು.
ಇದೇ ವೇಳೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, ಬರಪೀಡಿತ ಹಿನ್ನಲೆಯಲ್ಲಿ ಸಾವಿರಾರು ರೂಗಳು ವೆಚ್ಚಮಾಡಿ ಕೃಷಿಯಲ್ಲಿ ಕೈಸುಟ್ಟಕೊಂಡ ರೈತರಿಗಾಗಿ ಕೆಂದ್ರದಿಂದ ಬರಪರಿಹಾರ ಕೊಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಬರ ಅದ್ಯಾಯನ ನಡೆಸುತ್ತಿದ್ದು ಜೆಡಿಎಸ್ ವರಿಷ್ಠರಾದ ದೇವೆಗೌಡರು ಹೇಳಿದಂತೆ ಪ್ರತಿ ಎಕರೆಗೆ ಇಪ್ಪತೈದು ಸಾವಿರ ರೂ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ,ಜಿಲ್ಲಾಧ್ಯಕ್ಷರಾದ ಮುನೇಗೌಡ, ಮುಖಂಡರಾದ ತಾದೂರು ರಘು,ಮೇಲೂರು ಉಮೇಶ್,ವೇಣು ತಾಲ್ಲೂಕಿನ ಜೆಡಿಎಸ್ ಮುಖಂಡರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.