ಸುದ್ದಿಮೂಲ ವಾರ್ತೆ
ಹಾಸನ, ಏ.30: ಜಾತ್ಯತೀತ ಜನತಾದಳದ ಭದ್ರಕೋಟೆಯಾದ ಹಾಸನದಲ್ಲಿ ಪ್ರಧಾನಿ ನರೇಂದ್ರ ಮೋದಿ ಆ ಪಕ್ಷವನ್ನು ಕಾಂಗ್ರೆಸ್ನ ಬಿ-ಟೀಮ್ ಎಂದು ಟೀಕಿಸುವ ಮೂಲಕ ಜೆಡಿಎಸ್ ಭದ್ರಕೋಟೆ ವಶಕ್ಕೆ ಲಗ್ಗೆ ಇಟ್ಟಿದ್ದಾರೆ.
ಇಂದು ಬೇಲೂರು ತಾಲ್ಲೂಕಿನ ಜೆ ಸುರಾಪುರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಕ್ಷದ ಪರ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕೋಟೆಗೆ ಲಗ್ಗೆ ಇಡಲು ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ದೇವೇಗೌಡರ ತವರಿನಲ್ಲಿಯೇ ಜೆಡಿಎಸ್ ವಿರುದ್ಧ ಹಿಗ್ಗಾ-ಮುಗ್ಗ ತರಾಟೆಗೆ ತೆಗೆದುಕೊಂಡರು.
‘ಜೆಡಿಎಸ್ ಫ್ಯಾಮಿಲಿ ಪ್ರೈವೇಟ್ ಲಿಮಿಟೆಡ್ ಕಂಪೆನಿ’ ಎಂದು ಮೂದಲಿಸಿದ ಪ್ರಧಾನಿ ಮೋದಿ, ದೇವೇಗೌಡರ ಕುಟುಂಬ ರಾಜಕಾರಣವನ್ನು ಟೀಕಿಸಿ ಈ ಪಕ್ಷಕ್ಕೆ ಮತ ನೀಡಿದರೆ ಕಾಂಗ್ರೆಸ್ ಪಕ್ಷಕ್ಕೆ ಮತ ನಿಡಿದಂತೆ. ಅದು ಕಾಂಗ್ರೆಸ್ ಪಕ್ಷದ ಬಿ-ಟೀಮ್ ಎಂದು ಟೀಕಿಸಿದರು.
ಕೆಲವೇ ಸ್ಥಾನಗಳನ್ನು ಗೆಲ್ಲುವ ಮೂಲಕ ಜೆಡಿಎಸ್ ಅಧಿಕಾರ ಹಂಚಿಕೊಂಡು ಲೂಟಿ ಮಾಡಲು ಯತ್ನಿಸುತ್ತಿದೆ. ಅದಕ್ಕಾಗಿ ಆ ಪಕ್ಷಕ್ಕೆ ಕೊಡುವ ಪ್ರತಿಯೊಂದು ಮತವೂ ಕಾಂಗ್ರೆಸ್ಗೆ ಅನುಕೂಲ ಆಗಲಿದೆ. ಆ ಎರಡು ಪಕ್ಷಗಳು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಅಸ್ಥಿರತೆ ಇರಲಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿ ಹಿಮ್ಮುಖವಾಗಲಿದೆ ಎಂದು ಅಭಿಪ್ರಾಯಟ್ಟರು.
ಕಾಂಗ್ರೆಸ್- ಜೆಡಿಎಸ್ ಪರಸ್ಪರ ವಿರೋಧಿಗಳೆಂದು 2018ರಲ್ಲಿ ಬಿಂಬಿಸಿಕೊಂಡಿದ್ದವು. ಆದರೆ, ಚುನಾವಣೆ ನಂತರ ಫಲಿತಾಂಶ ಹೊರಬಿದ್ದಾಗ ಎರಡೂ ಪಕ್ಷಗಳು ಸಮ್ಮಿಶ್ರ ಸರ್ಕಾರ ನಡೆಸಿದವು. ಈಗಲೂ ಸಹ ತೋರಿಕೆಗೆ ಮಾತ್ರ ಕಾಂಗ್ರೆಸ್ ಜೆಡಿಎಸ್ನ ಮುಖಂಡರು ಆರೋಪ, ಪ್ರತ್ಯಾರೋಪಗಳನ್ನು ಮಾಡುತ್ತಾರೆ. ಮುಂದೆ ಇಂತಹದ್ದೇ ಸಂದರ್ಭ ಉದ್ಭವವಾದರೆ ಮತ್ತೆ ಒಂದುಗೂಡುತ್ತಾರೆ. ಹೀಗಾಗಿ ಜೆಡಿಎಸ್ ಅನ್ನು ಅಧಿಕಾರದಿಂದ ದೂರ ಇಡಬೇಕು ಎಂದರು.
ಕಾಂಗ್ರೆಸ್-ಜೆಡಿಎಸ್ ಮಧ್ಯೆ ಒಂದು ವಿಚಿತ್ರ ಸಾಮ್ಯತೆ ಇದೆ. ರಾಜ್ಯ ಕಾಂಗ್ರೆಸ್ನಲ್ಲಿ ಏನೇ ನಡೆಯಬೇಕಾದರೂ ದೆಹಲಿಯ ಒಂದು ಕುಟುಂಬದವರ ಮಾತನ್ನೇ ಕೇಳಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅದೇ ರೀತಿ ರಾಜ್ಯದಲ್ಲಿ ಜೆಡಿಎಸ್ ಸಹ ಒಂದು ಕುಟುಂಬದ ಪಕ್ಷವಾಗಿದೆ. ಆ ಎರಡೂ ಪಕ್ಷಗಳು ಸರ್ಕಾರ ನಡೆಸಿದಲ್ಲಿ ಎರಡು ಕುಟುಂಬಗಳ ಕೈಯಲ್ಲಿ ರಾಜ್ಯದ ಆಡಳಿತ ಸಿಲುಕಿದಂತಾಗುತ್ತದೆ ಎಂದು ಮೋದಿ ವಿಶ್ಲೇಷಿಸಿದರು.
ಭಾರತೀಯ ಜನಾತ ಪಕ್ಷ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ, ಲಸಿಕೆ, ಮನೆ, ವಿದ್ಯುತ್, ನೀರು, ನೀರಾವರಿ ಕಲ್ಪಿಸಿದೆ ಎಂದ ಪ್ರಧಾನಿ ಕಾಂಗ್ರೆಸ್ ನೀತಿ ಒಬ್ಬರನ್ನು ಕಸಿದು ಇನ್ನೊಬ್ಬರಿಗೆ ನೀಡುವುದಾಗಿದೆ. ಕೆಲವರನ್ನು ತುಷ್ಟೀಕರಣ ಮಾಡುವ ನಿಟ್ಟಿನಲ್ಲಿಆ ಪಕ್ಷ ನಿರತವಾಗಿದೆ. ಪರಿಶಿಷ್ಟರಿಗೆ, ಹಿಂದುಳಿದವರಿಗೆ ಯಾವುದೇ ರೀತಿಯ ಅಭಿವೃದ್ಧಿ ಮಾಡದೆ ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ದಿ ಖಚಿತ. ಬಡವರ, ಶೋಷಿತರ ಅಭಿವೃದ್ದಿಗೆ ಪಕ್ಷದ ಅನೇಕ ಯೋಜನೆಗಳು ಇವೆ. ಕಳೆದ 9 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಸ್ತ್ರೀ ಸಬಲೀಕರಣ ಒತ್ತು ನೀಡುತ್ತಿದ್ದು, ಅವರನ್ನು ಮನೆ ಒಡತಿಯನ್ನಾಗಿ ಮಾಡಿದೆ. ಆದರೆ, ಕಾಂಗ್ರೆಸ್ ಅವಧಿಯಲ್ಲಿ ರೈತರಿಗೆ ಯಾವುದೇ ರೀತಿಯ ಸಾಲ ಮನ್ನಾ ಮಾಡದೆ ವಂಚನೆ ಮಾಡಿತ್ತು. ಆದರೆ, ಈಗ ಬಿಜೆಪಿ ರೈತ ಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ರೈತರಿಗೆ ರಸಗೊಬ್ಬರ ಹೆಚ್ಚಿನ ದರದಲ್ಲಿ ಖರೀದಿಸಿ ಕಡಿಮೆ ದರದಲ್ಲಿ ನಿಡುತ್ತಿದೆ. ಇದಕ್ಕಾಗಿ 2.15 ಲಕ್ಷ ಕೋಟಿ ಹಣ ರಿಯಾಯಿತಿಯನ್ನು ರೈತರ ಪರವಾಗಿ ಸರ್ಕಾರ ನೀಡುತ್ತಿದೆ. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯೂರಿಯಾದಲ್ಲಿ ಸಹ ಅವ್ಯವಹಾರ ನಡೆಸಿತ್ತು. ಈಗ ಬಿಜೆಪಿ ರೈತರಿಗೆ ತೊಂದರೆ ಆಗದಂತೆ ನ್ಯಾನೋ ಯೂರಿಯಾ ಸರಬರಾಜು ಮಾಡಿ ಸಮಸ್ಯೆ ಪರಿಹಾರ ಮಾಡಿದೆ ಎಂದರು.
ಕರ್ನಾಟಕವನ್ನು ನಂ.1 ರಾಜ್ಯ ಮಾಡಲು ಅವಶ್ಯಕತೆ ಇದೆ. ಅಗತ್ಯ ಮೂಲಭೂತಸೌಲಭ್ಯಗಳಾದ ರಸ್ತೆ, ರೈಲು ವ್ಯವಸ್ಥೆ ಕಲ್ಪಿಸಬೇಕಾಗಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನೀಡಿದ ಅನುದಾಕ್ಕಿಂತ ಹೆಚ್ಚು ಅನುದಾನವನ್ನು ಎನ್ಡಿಎ ಸರ್ಕಾರ ನೀಡಿದೆ. ಇದು ಡಬಲ್ ಎಂಜಿನ್ ಸರ್ಕಾರ ಇದ್ದ ಕಾರಣ ಸಾಧ್ಯವಾಗಿದೆ ಎಂದು ಹೇಳಿದರು.