ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.2: ಬಿಜೆಪಿ ಜತೆ ಜೆಡಿಎಸ್ ಮೈತ್ರಿಯಿಂದ ಬೇಸತ್ತಿರುವ ನೂರಾರು ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಅವರೆಲ್ಲರನ್ನೂ ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ವಸತಿ ಸಚಿವ ಜಮೀರ್ ಅಹಮದ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಚನ್ನಪಟ್ಟಣ ಮಾಜಿ ಶಾಸಕ ಅಶ್ವತ್, ಹಾಗೂ ಜಬಿ, ಜಿಯಾಜಿಲ್ಲಾಖಾನ್ ಸೇರಿದಂತೆ ನೂರಾರು ಮುಖಂಡರನ್ನು ಸ್ವಾಗತಿಸಿ ಮಾತನಾಡಿದ ಅವರು, ಹಾಲಿ ಹಾಗೂ ಮಾಜಿ ಶಾಸಕರು, ಪಾಲಿಕೆ ಸದಸ್ಯರು ಸೇರಿ ಸಾವಿರಾರು ಮುಖಂಡರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂದು ಹೇಳಿದರು.
ರಾಮನಗರ, ಚನ್ನಪಟ್ಟಣ, ಹಾಸನ, ಮಂಡ್ಯ ಸಹಿತ ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಅಲ್ಪಸಂಖ್ಯಾತರು ಸೇರಿ ಜಾತ್ಯತೀತ ಮನೋಭಾವವುಳ್ಳ ಮುಖಂಡರು ಬೇಸರಗೊಂಡು ನಮ್ಮ ಸಂಪರ್ಕ ದಲ್ಲಿದ್ದಾರೆ. ಅವರೆಲ್ಲರನ್ನೂ ನಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದರು.
ದೇವೇಗೌಡರು ಈಗಲೂ ಸೆಕ್ಯುಲರ್ ಆಗಲೂ ಸೆಕ್ಯುಲರ್. ಅವರಿಂದ ನಮ್ಮ ಸಮಾಜಕ್ಕೆ ನ್ಯಾಯ ಸಿಕ್ಕಿದೆ, ಎರಡನೇ ಹಂತದ ನಾಯಕರನ್ನೂ ಬೆಳೆಸಿದ್ದಾರೆ. ಆದರೆ ಕುಮಾರಸ್ವಾಮಿ ಸೆಕ್ಯುಲರ್ ಅಲ್ಲ. ಮುಸ್ಲಿಂ ಸಮುದಾಯದ ಮತ ನನಗೆ ಅನಿವಾರ್ಯವಾಗಿ ಹಾಕಿದರು ಎಂದು ಹೇಳಿರುವುದು ನೋವು ತಂದಿದೆ ಎಂ ಅವರು, ಗೆದ್ದಿದ್ದು 12 ಸಾವಿರ ಮತ ಅಂತರದಿಂದ, ಡಿ. ಕೆ. ಶಿವಕುಮಾರ್ ಅವರಂತೆ 1.20 ಲಕ್ಷ ಮತಗಳ ಅಂತರದಿಂದ ಅಲ್ಲ. ಮುಸ್ಲಿಂ ಸಮುದಾಯ ಮತ ಕೊಡದಿದ್ದರೆ ಏನಾಗುತ್ತಿತ್ತು ಎಂಬುದು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಎಚ್. ಡಿ. ಕುಮಾರಸ್ವಾಮಿ ಅವರ ಎಲ್ಲ ವಿದ್ಯೆ ನೋಡಿದ್ದೆ. ಆದರೆ, ಪ್ಯಾಂಟ್ ಒಳಗೆ ಆರ್ ಎಸ್ ಎಸ್ ಚಡ್ಡಿ ಹಾಕಿದ್ದು ಗೊತ್ತಿರಲಿಲ್ಲ ಎಂದು ಲೇವಡಿ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಜಮೀರ್ ಅಹಮದ್ ಖಾನ್ ಅವರ ಸಲಹೆ ಯಂತೆ ಅವರ ಮಾರ್ಗದರ್ಶನ ದಲ್ಲೇ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಮಾಡಿ ಜೆಡಿಎಸ್ ನಿಂದ ನಮ್ಮ ತತ್ವ ಸಿದ್ದಾಂತ ಒಪ್ಪಿ ಬರುವವರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಸಚಿವ, ರಾಮಲಿಂಗಾರೆಡ್ಡಿ, ಸಂಸದ ಡಿ. ಕೆ. ಸುರೇಶ್ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.