ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.3: ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡುವ ದಿನವನ್ನು ಮತ್ತೆ ಮುಂದೂಡಿದೆ.
224 ಕ್ಷೇತ್ರಗಳ ಪೈಕಿ 93 ಕ್ಷೇತ್ರಗಳಿಗೆ ಕಳೆದ ಡಿಸೆಂಬರ್ನಲ್ಲಿಯೇ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಜೆಡಿಎಸ್ ಇಂದು ಸೋಮವಾರ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತದೆ ಎಂದು ಎಲ್ಲರೂ ನಿರೀಕ್ಷೆಯಿಂದ ಕಾದಿದ್ದರು. ಆದರೆ, ಕಾರಾಣಾಂತರಗಳಿಂದ ಪಟ್ಟಿ ಬಿಡುಗಡೆ ಮತ್ತೆ ಮುಂದೆ ಹೋಗಿದೆ.
ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಮಂಗಳವಾರ ಅಥವಾ ಬುಧವಾರ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ಬಿಜೆಪಿ ಇದುವರೆಗೆ ಒಂದೂ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಏ.8 ಅಥವಾ 10ಕ್ಕೆ ಮೊದಲ ಪಟ್ಟಿ ಬಿಡುಗಡೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಗಳಿಂದ ಜೆಡಿಎಸ್ ಸಹ ಕಾದು ನೋಡುವ ತಂತ್ರ ಅನುಸರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ಕುಟುಂಬದೊಳಗೆ ಹಾಸನ ಟಿಕೆಟ್ ಕಗ್ಗಂಟಾಗಿದೆ. ಭವಾನಿ ರೇವಣ್ಣ ಅವರು ಹಾಸನ ಟಿಕೆಟ್ಗಾಗಿ ಕುಟುಂಬದೊಳಗೆ ಪಟ್ಟು ಹಿಡಿದಿದ್ದರೆ ಕುಮಾರಸ್ವಾಮಿ ಅವರು ಅದಕ್ಕೆ ಸಮ್ಮತಿಸುತ್ತಿಲ್ಲ. ಇದೇನೇ ಇದ್ದರೂ ಸಹ ಹಾಸನ ಟಿಕೆಟ್ ಹೊರತುಪಡಿಸಿ ಅಂದಾಜು 35 ಕ್ಷೇತ್ರಗಳಿಗೆ ಇಂದು ಎರಡನೇ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.