ಸುದ್ದಿಮೂಲ ವಾರ್ತೆ ಮಸ್ಕಿ, ಫೆ. 12:
2023ರ ಸಾರ್ವತ್ರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಬಾರಿಯೂ ಮಸ್ಕಿ ಕ್ಷೇತ್ರದ ಪಾಲಿಗೆ ಜೆಡಿಎಸ್ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದ ಕೆಆರ್ಪಿ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿವೆ!.
ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗಲೇ ಮಸ್ಕಿಯಲ್ಲಿ ಜೆಡಿಎಸ್ ಮತ್ತು ಹೊಸದಾಗಿ ಅಸ್ತಿತ್ವಕ್ಕೆ ಬಂದ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೊಸ ಅಲೆಯನ್ನು ಸೃಷ್ಟಿಸುವ ಮೂಲಕ ಪ್ರಭಾವಿ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುವ ಉಮೇದು ವ್ಯಕ್ತಪಡಿಸಿದ್ದವು. ಆದರೆ ಆರಂಭದಲ್ಲಿ ಒಂದೆರಡು ರಾಜಕೀಯ ಚಟುವಟಿಕೆ ಬಿಟ್ಟರೇ ಪುನಃ ತೆರೆಮರೆಗೆ ಸರಿದ್ದು, ಈ ಬಾರಿಯಾದರೂ ಹೊಸ ಪಕ್ಷ, ಹೊಸ ಅಭ್ಯರ್ಥಿಗಳ ಪ್ರವೇಶ ಮಸ್ಕಿ ಕ್ಷೇತ್ರದಲ್ಲಿ ಆಗುತ್ತದೆ ಎನ್ನುವ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ.
ನಿರೀಕ್ಷೆ ನಿರಾಸೆ: ಪಂಚರತ್ನ ಯಾತ್ರೆ, ನೀರಾವರಿ ಕನಸು ಸೇರಿ ಹಲವು ಪ್ರಣಾಳಿಕೆಯನ್ನಿಟ್ಟುಕೊಂಡು ಅಖಾಡಕ್ಕೆ ಇಳಿದಿದ್ದ ಜೆಡಿಎಸ್ ಮಸ್ಕಿ ಪಾಲಿಗೆ ಆರಂಭದಲ್ಲೇ ಸೊನ್ನೆ ಸುತ್ತಿದೆ. ಇಲ್ಲಿನ ರಾಘವೇಂದ್ರ ನಾಯಕ ಮೂಲಕ ಸ್ಥಳೀಯ ಚುನಾವಣೆ ಎದುರಿಸಲು ಸಜ್ಜಾದ ಜೆಡಿಎಸ್ ಎಲ್ಲ ಬಿ ಫಾರಂ ನೀಡಿ ಉಪಚುನಾವಣೆಯಲ್ಲಿ ಬಲಾಬಲ ಅಳೆಯಲು ಯತ್ನಿಸಿತ್ತು, ಆದರೆ ಸಮರದಲ್ಲೇ ಸೊನ್ನೆ ಸುತ್ತಿದ್ದರಿಂದ ಸಾರ್ವತ್ರಿಕ ಚುನಾವಣೆಗೆ ಜೆಡಿಎಸ್ನಿಂದ ಇದುವರೆಗೂ ಅಧಿಕೃತ ಅಭ್ಯರ್ಥಿಯೂ ಘೋಷಣೆಯಾಗಿಲ್ಲ. ಅಲ್ಲದೇ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಬಂದು ಹೋದರೂ ಮಸ್ಕಿಗೆ ಮಾತ್ರ ಕಾಲಿಟ್ಟಿಲ್ಲ.
ಆರಂಭ ಮಾತ್ರ ಅಬ್ಬರ: ಇನ್ನು ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಮಸ್ಕಿಯಲ್ಲಿ ಆರಂಭದಲ್ಲಿ ಅಬ್ಬರಿಸಿದ್ದು ಬಿಟ್ಟರೇ ಮತ್ತೆ ಯಾವ ಚಟುವಟಿಕೆಯೂ ಇಲ್ಲ. ಪಕ್ಷದ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಇಲ್ಲಿನ ಹಲವರ ಸಭೆ ನಡೆಸಿ, ಎರಡು ದಿನ ವಾಸ್ತವ್ಯ ಹೂಡುವ ಮೂಲಕ ಪರ್ಯಾಯ ರಾಜಕೀಯಕ್ಕೆ ನಾಂದಿ ಹಾಡುತ್ತಾರೆ ಎನ್ನುವ ನಿರೀಕ್ಷೆಗಳಿದ್ದವು. ಆದರೆ ಇವೆಲ್ಲವೂ ಈಗ ಪಲ್ಟಿ ಹೊಡೆದಿವೆ. ಆರಂಭದ ದಿನಗಳು ಬಿಟ್ಟರೇ ರೆಡ್ಡಿ ಪುನಃ ಮಸ್ಕಿಯತ್ತ ಮುಖ ಮಾಡಿಲ್ಲ. ಹೀಗಾಗಿ ಈ ಬಾರಿಯಾದರೂ ಪರ್ಯಾಯ ಪಕ್ಷ, ಅಭ್ಯರ್ಥಿಯ ಮುಖ ಕಾಣಲಿದೆ ಎನ್ನುವ ನಿರೀಕ್ಷೆ ಕೂಡ ಸುಳ್ಳಾಗಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಒಳೇಟಿನ ಭೀತಿ
ಹೊಸ ಪಕ್ಷ, ಹೊಸ ಅಭ್ಯರ್ಥಿಗಳ ಪ್ರವೇಶ ಸಾಧ್ಯತೆ ಕಡಿಮೆ ಎನ್ನುವ ಕಾರಣಕ್ಕೆ ಈಗ ಅದೇ ಹಳೆ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಆದರೆ ಎರಡು ಕಡೆಗೂ ಪರಸ್ಪರ ಎದುರಾಳಿಗಳಿಗಿಂತ ಒಳೇಟಿನ ಭೀತಿ ಶುರುವಾಗಿದೆ. ಎರಡು ಕಡೆಯಲ್ಲೂ ಆಂತರಿಕ ಭಿನ್ನಾಭಿಪ್ರಾಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಚುನಾವಣೆ ಹೊತ್ತಿಗೆ ಇದು ಯಾವ ಪರಿಣಾಮ ಬೀರಲಿವೆಯೋ? ಕಾದು ನೋಡಬೇಕಿದೆ.