ಸುದ್ದಿಮೂಲ ವಾರ್ತೆ
ಬೆಂಗಳೂರು,ಜು.11 : ಹಾಡಹಗಲೇ ಕಂಪನಿಗೆ ನುಗ್ಗಿದ ದುಷ್ಕರ್ಮಿಗಳು ಖಾಸಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಇಬ್ಬರನ್ನು ಕೊಲೆ ಮಾಡಿರುವ ದುರ್ಘಟನೆ ಅಮೃತಹಳ್ಳಿಯಲ್ಲಿ ನಡೆದಿದ್ದು ನಗರದ ಜನತೆ ಬೆಚ್ಚಿಬಿದ್ದಿದೆ.
ಅಮೃತಹಳ್ಳಿಯ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಫಣೀಂದ್ರ ಸುಬ್ರಮಣ್ಯ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ವಿನು ಕುಮಾರ್ ಕೊಲೆಯಾದ ದುರ್ದೈವಿಗಳು. ಇನ್ನು ಫೆಲಿಕ್ಸ್ ಎಂಬಾತ ಇಬ್ಬರನ್ನು ತಲ್ವಾರ್ ನಿಂದ ಹೊಡೆದು ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗುತ್ತಿರುವ ಫೆಲಿಕ್ಸ್, ಏರೋನಿಕ್ಸ್ ಸಂಸ್ಥೆಯ ಹಳೆ ಉದ್ಯೋಗಿಯಾಗಿದ್ದನು. ಏರೋನಿಕ್ಸ್ ಕಂಪನಿಯನ್ನು ಬಿಟ್ಟುಹೋದ ನಂತರ ಆತನೇ ಸ್ವಂತ ಕಂಪನಿ ಸ್ಥಾಪಿಸಿದ್ದನು. ಆದರೆ, ತನ್ನ ಉದ್ಯಮಕ್ಕೆ ಪಣೀಂದ್ರ ಎದುರಾಳಿಯಾಗಿದ್ದ ಎಂದು ಭಾವಿಸಿದ್ದನು. ಇದರಿಂದಾಗಿ ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ಎಂಡಿ ಫಣೀಂದ್ರ ಸುಬ್ರಮಣ್ಯ ಕೊಲೆಗೆ ಸಂಚು ರೂಪಿಸಿ ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಏರೋನಿಕ್ಸ್ ಕಂಪನಿಗೆ ಎಂಟ್ರಿಕೊಟ್ಟ ಫೆನಿಕ್ಸ್ ತಲ್ವಾರ್ ಮತ್ತು ಚಾಕುವಿನಿಂದ ಪಣೀಂದ್ರ ಹಾಗೂ ವಿನುಕುಮಾರ್ ಮೇಲೆ ದಾಳಿ ಮಾಡಿದ್ದಾನೆ. ತನ್ನ ಸಂಚಿನಂತೆ ಇಬ್ಬರನ್ನು ಕೊಚ್ಚಿ ಕೊಲೆ ಮಾಡಿ ಅಲ್ಲಿಂದ ಪರಾರಿ ಆಗಿದ್ದಾನೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.