ಬೆಂಗಳೂರು,ಆ.6; ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ಟ್ರಸ್ ವೆಲ್ ಆಸ್ಪತ್ರೆಯ ಆವರಣದಿಂದ ರಸ್ತೆ ಸುರಕ್ಷತೆ ಕುರಿತು ಬೈಕಥಾನ್ ಜಾಥ ಆಯೋಜಿಸಿತ್ತು. ೨೦೦ ಕ್ಕೂ ಹೆಚ್ಚು ಉತ್ಸಾಹಿ ಸರ್ಜನ್ ಗಳು, ವೈದ್ಯರು ಬೈಕ್ ರೈಡ್ ನಲ್ಲಿ ಭಾಗವಹಿಸಿ ರಸ್ತೆ ಸುರಕ್ಷತೆ ಕುರಿತು ಸಂದೇಶ ಸಾರಿ ಅರಿವು ಮೂಡಿಸಿದರು.
“ಅಪಘಾತಗಳು ಅಪಘಾತಗಳಲ್ಲ, ಮಾನವ ನಿರ್ಮಿತ ಅವಘಡಗಳು. ಅರಿತು ಸುರಕ್ಷಿತ ವಿಧಾನದಲ್ಲಿ ಸಂಚರಿಸಿ” ಎಂಬ ಘೋಷವಾಕ್ಯವನ್ನು ಮೊಳಗಿಸಿದರು.
ಕಳೆದ ೮೩ ರ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡದ ಸದಸ್ಯ ಸಯ್ಯದ್ ಕಿರ್ಮಾನಿ, ಸಂಚಾರಿ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಅನುಚೇತ್, ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಅಧ್ಯಕ್ಷ ಡಾ. ವೆಂಕಟೇಶ್, ಡಾ ಮನೀಶ್ ಜೋಶಿ, ಟ್ರಸ್ಟ್ ವೆಲ್ ಆಸ್ಪತ್ರೆಯ ನಿರ್ದೇಶಕ ಡಾ ಮಧುಸೂದನ್, ಗಾಯಕ ವಾಸು ದೀಕ್ಷಿತ್ ಅವರು ರಸ್ತೆ ಸುರಕ್ಷತೆ ಬಲೂನ್ಗಳನ್ನು ಹಾರಿಬಿಡುವ ಮೂಲಕ ಜಾಥಾಗೆ ಚಾಲನೆ ನೀಡಿದರು.
ಬೈಕರ್ ಗಳು ಟೌನ್ ಹಾಲ್, ಮೇಖ್ರಿ ವೃತ್ತದ ಮೂಲಕ ದೇವನಹಳ್ಳಿ ಟೋಲ್ ಪ್ಲಾಜಾ, ಚಿಕ್ಕಬಳ್ಳಾಪುರದ ಗುಡಿಬಂಡೆಯ ಫಾರಂಹೌಸ್ ವರೆಗೆ 1೦೦ ಕಿಲೋಮೀಟರ್ ಜಾಥದಲ್ಲಿ ಭಾಗವಹಿಸಿದ್ದರು. ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿ ಶಿಸ್ತುಬದ್ಧವಾಗಿ ವಾಹನ ಚಲಾಯಿಸಿದರು.
ಸಂಚಾರಿ ವಿಭಾಗದ ಜಂಟಿ ಆಯುಕ್ತ ಅನುಚೇತ್ ಮಾತನಾಡಿ, ಇತ್ತೀಚಿನ ಅಧ್ಯಯನಗಳ ಪ್ರಕಾರ ಅಪಘಾತಗಳಲ್ಲಿ ಸೂಕ್ತ ಶಿಕ್ಷಣ ಪಡೆಯದವರು ಸಾವನ್ನಪ್ಪುತ್ತಿದ್ದಾರೆ. ಬಹುತೇಕ ಮಂದಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮಾತ್ರ ಪೂರ್ಣಗೊಳಿಸಿರುತ್ತಾರೆ. ಹೀಗಾಗಿ ಶಾಲಾ ಹಂತದಲ್ಲಿ ಸಂಚಾರಿ ನಿಯಮಗಳ ಪಾಲನೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಬಹುತೇಕ ಅಪಘಾತಗಳಲ್ಲಿ ಸಾವನ್ನಪ್ಪುವವರು ಹೆಲ್ಮೆಟ್ ಧರಿಸದೇ ಇರುವುದು ಮತ್ತು ಐ.ಎಸ್.ಐ ಗುಣಮಟ್ಟದ ಹೆಲ್ಮೆಟ್ ಹಾಕಿಲ್ಲದಿರುವುದು ಕಾರಣವಾಗಿದೆ. ನಮ್ಮ ರಕ್ಷಣೆ ನಮ್ಮ ಕೈಯಲ್ಲಿದ್ದು, ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು. ಮೊಬೈಲ್ ಬಳಸಬಾರದು ಎಂದರು.
ಸಯ್ಯದ್ ಕಿರ್ಮಾನಿ ಮಾತನಾಡಿ, ನಮ್ಮ ತಂಡ ವಿಶ್ವಕಪ್ ಕ್ರಿಕೆಟ್ ಗೆದ್ದಾಗ ಸುರಕ್ಷತೆಗಾಗಿ ಹೆಲ್ಮೆಟ್ ಇರಲಿಲ್ಲ. ವಿದ್ಯಾರ್ಥಿಗಳು, ಯುವ ಸಮೂಹ ವೇಗದ ರೋಚಕತೆಗೆ ಒಳಗಾಗಿ ಜೀವ ಕಳೆದುಕೊಳ್ಳಬಾರದು ತಮ್ಮ ಜೀವ ರಕ್ಷಣೆ ಜೊತೆಗೆ ಮತ್ತೊಬರ ಸುರಕ್ಷತೆಗೂ ಒತ್ತು ನೀಡುವುದು ಮಾನವೀಯ ಧರ್ಮ ಎಂದರು.
ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಅಧ್ಯಕ್ಷ ಡಾ. ವೆಂಕಟೇಶ್ ಮಾತನಾಡಿ, ಶಸ್ತ್ತಚಿಕಿತ್ಸೆ ಜೀವ ರಕ್ಷಿಸುತ್ತದೆ. ಅದೇ ರೀತಿ ಸುರಕ್ಷಿತ ವಿಧಾನವನ್ನು ಅಳವಡಿಸಿಕೊಂಡರೆ ಜೀವ ಉಳಿಸಬಹುದಾಗಿದೆ ಎಂದು ಹೇಳಿದರು.
ಟ್ರಸ್ಟ್ ವೆಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಚ್.ವಿ.ಮಧುಸೂದನ್ ಮಾತನಾಡಿ, ಮೆದುಳಿನ ಗಾಯವನ್ನು ತಡೆಗಟ್ಟಲು ಹೆಲ್ಮೆಟ್ ಧರಿಸುವುದು ಪ್ರಬಲ ಮತ್ತು ಆದರೆ ಸರಳವಾದ ಮಾರ್ಗ. ಯಾವುದೇ ರಸ್ತೆ ಅಪಘಾತ ವಿನಾಶಕಾರಿ, ಹೀಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂದರು.
ಗಾಯಕ ವಾಸು ದೀಕ್ಷಿತ್ “ಆಗಲ್ಲ ಅನ್ನಬೇಡಿ – ಹೆಲ್ಮೆಟ್ ಧರಿಸಿ, ಜೀವ ಉಳಿಸಿಕೊಳ್ಳಿ ಎಂಬ ಜಾಗೃತಿ ಗೀತೆ ಹಾಡಿದರು.
ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಬೈಕಥಾನ್ ಗೆ ಟ್ರೆಸ್ಟ್ ವೆಲ್ ಆಸ್ಪತ್ರೆಯ ಆವರಣದಲ್ಲಿ ಮಾಜಿ ವಿಕೇಟ್ ಕೀಪರ್ ಸಯ್ಯದ್ ಕಿರ್ಮಾನಿ, ಸಂಚಾರಿ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಅನುಚೇತ್, ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಅಧ್ಯಕ್ಷ ಡಾ. ವೆಂಕಟೇಶ್, ಟ್ರಸ್ಟ್ ವೆಲ್ ಆಸ್ಪತ್ರೆಯ ನಿರ್ದೇಶಕ ಡಾ ಮಧುಸೂದನ್,ಡಾ ಮನೀಶ್ ಜೋಶಿ,.ಗಾಯಕ ವಾಸು ದೀಕ್ಷಿತ್ ಅವರು ರಸ್ತೆ ಸುರಕ್ಷತೆ ಬಲೂನ್ಗಳನ್ನು ಹಾರಿಬಿಡುವ ಮೂಲಕ ಚಾಲನೆ ನೀಡಿದರು.