ಸುದ್ದಿಮೂಲ ವಾರ್ತೆ
ಕುಷ್ಟಗಿ, ಜು. 17:ಪಟ್ಟಣದ ಭೋವಿ ಸಮುದಾಯದ ನಿವಾಸಿಯಾದ ಖಾಸಗಿ ವಾಹಿನಿಯ ತಾಲೂಕು ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದ 43 ವಯಸ್ಸಿನ ರಮೇಶ ಹಿರೇಮನಿ ಅವರು ಸೋಮವಾರ ಬೆಳಿಗ್ಗೆ ಹುಬ್ಬಳ್ಳಿಯಲ್ಲಿ ಅನಾರೋಗ್ಯದಿಂದ ನಿಧನರಾದರು.
ಮೃತರು, ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ, ಮಾಧ್ಯಮ ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಐದು ಗಂಟೆ ಸುಮಾರಿಗೆ ಪಟ್ಟಣದ ಹೊರ ವಲಯದ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆರ್ಥಿಕ ಸಹಾಯ: ರಮೇಶ ಹಿರೇಮನಿ ಅವರ ಅಕಾಲಿಕ ಸಾವಿಗೆ ಮಾಧ್ಯಮ ಸ್ನೇಹಿತರು ಹಾಗೂ ಜನಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕ ಹಾಗೂ ಕರ್ನಾಟಕ ಪತ್ರಕರ್ತರ ಸಂಘ ತಾಲೂಕು ಘಟಕದ ವತಿಯಿಂದ ಮೃತರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಯಿತು.
ಬಳಿಕ ಮಾಧ್ಯಮ ಸ್ನೇಹಿತರೆಲ್ಲರೂ ಸಭೆ ಸೇರಿ ಮೌನಾಚರಣೆ ಮಾಡುವ ಮೂಲಕ ಮೃತ ರಮೇಶ ಹಿರೇಮನಿ ಅವರ ಆತ್ಮಕ್ಕೆ ಶಾಂತಿ ಕೋರಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಅನೀಲ್ ಆಲ್ ಮೇಲ್, ಕರ್ನಾಟಕ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಘಟಕ ಅಧ್ಯಕ್ಷ ಶರಣಪ್ಪ ರಾವಣಕಿ, ಪತ್ರಕರ್ತರಾದ ರವೀಂದ್ರ ಬಾಕಳೆ, ಸಂಗಮೇಶ ಸಿಂಗಾಡಿ, ರಮೇಶ ಚಲವಾದಿ, ಶರಣಪ್ಪ ಲೈನದ್, ಗಿರೀಶ ದಿವಾಣಜಿ, ಪವಾಡೆಪ್ಪ ಚೌಡ್ಕಿ, ಬಸವರಾಜ ಗಾಣಿಗಾರ, ಶೇಖರ ಗೋರೆಬಾಳ ಇನ್ನಿತರರು ಉಪಸ್ಥಿತರಿದ್ದರು.