ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.28: ಪತ್ರಕರ್ತರಾದವರು ಸಮಾಜಕ್ಕೆ ಉತ್ತಮವಾದದ್ದನ್ನು ನೀಡದಿದ್ದರೆ ತಮ್ಮ ಕರ್ತವ್ಯಕ್ಕೆ ಚ್ಯುತಿ ಮಾಡಿಕೊಂಡಂತಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಎಫ್ಕೆಸಿಸಿಐ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಅವರಿಗೆ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಇತ್ತೀಚಿನ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಎಲ್ಲರೂ ಮನನೊಂದುಕೊಂಡಿದ್ದೇವೆ. ವಾಕ್ ಸ್ವಾತಂತ್ರ್ಯಕ್ಕೆ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ. ಪ್ರತಿನಿತ್ಯ ಮಾಧ್ಯಮಗಳನ್ನು ಗಮನಿಸಿದಾಗ ವಾಕ್ಸ್ವಾತಂತ್ರ್ಯ ಎಂಬುದು ಅರ್ಧದಷ್ಟು ಕಳೆದೇ ಹೋಗಿದೆ ಎನಿಸುತ್ತಿದೆ. ದೊಡ್ಡ ಜಾತಿಯವರ ಬಗ್ಗೆ, ಶ್ರೀಮಂತರ ಬಗ್ಗೆ, ಇಂಡಸ್ಟ್ರಿ ಹೌಸ್ಗಳ ಬಗ್ಗೆ ಬರೆಯಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಶಕ್ತಿಗಳ ಬಗ್ಗೆ ಬರೆಯುವುದಕ್ಕೆ ಆಯಾ ಸಂಸ್ಥೆಗಳಿಂದಲೇ ಲಗಾಮು ಬೀಳುತ್ತಿದೆ. ಹೀಗಾಗಿ ಪತ್ರಿಕೋದ್ಯಮದ ಧ್ವನಿ ಕಡಿಮೆಯಾಗುತ್ತಿದೆ. ಆದರೆ, ಹಾಗಾಗಬಾರದು ಎಂದು ಹೇಳಿದರು.
ಇಂದಿನ ವಿದ್ಯುನ್ಮಾನ ಮಾಧ್ಯಮಗಳನ್ನು ನೋಡಿದಾಗ ಮತ್ತು ಪತ್ರಿಕೆಗಳಲ್ಲಿ ಅನೇಕ ದಿನಗಳ ಮುಖ್ಯ ಸುದ್ದಿ ಕೇವಲ ರಾಜಕೀಯ ಆರೋಪ- ಪ್ರತ್ಯಾರೋಪ, ವೈಯಕ್ತಿಕ ನಿಂದನೆಗಳದ್ದೇ ಆಗಿರುತ್ತದೆ. ಸಾರ್ವಜನಿಕರನ್ನು ಏಕೆ ಹೀಗೆ ತಪ್ಪುದಾರಿಗೆ ಎಳೆದುಕೊಂಡು ಹೋಗಲಾಗುತ್ತಿದೆ ತಿಳಿಯುತ್ತಿಲ್ಲ. ಕೇಳಿದರೆ ಪ್ರಸಾರ, ಟಿಆರ್ಪಿ ಎಂದು ಹೇಳುತ್ತಾರೆ. ಇದನ್ನು ಪೂರ್ಣಪ್ರಮಾಣದಲ್ಲಿ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಉತ್ತಮ ನಾಗರಿಕ ಸಮುದಾಯವನ್ನು ಸೃಷ್ಟಿಸುವಂತಹ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಸಮಾಜದ ಭವಿಷ್ಯತ್ತಿಗಾಗಿ ಉತ್ತಮವಾದದ್ದನ್ನು ಬರೆಯದಿದ್ದರೆ ತಮ್ಮ ಕರ್ತವ್ಯಕ್ಕೆ ಚ್ಯುತಿ ಮಾಡಿಕೊಂಡಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಖಾದ್ರಿ ಶಾಮಣ್ಣ ಸ್ಮಾರಕ ಟ್ರಸ್ಟ್ ಈ ಬಾರಿ ನಂಜುಂಡೇಗೌಡ ಅವರಿಗೆ ಪ್ರಶಸ್ತಿ ನೀಡುವ ಮೂಲಕ ಉತ್ತಮ ಆಯ್ಕೆ ಮಾಡಿದೆ. ನಂಜುಂಡೇಗೌಡ ಅವರು ಪತ್ರಿಕೋದ್ಯಮಕ್ಕಾಗಿ ಉಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದು ತಮ್ಮ ಮತ್ತು ಅವರ ಒಡನಾಟ ಸ್ಮರಿಸಿಕೊಂಡರು.
ಪ್ರಶಸ್ತಿ ಸ್ವೀಕರಿಸಿದ ನಂಜುಂಡೇಗೌಡ ಅವರು ಮಾತನಾಡಿ, ನನ್ನ ವೃತ್ತಿ ಜೀವನದ ಬೆಳವಣಿಗೆಗೆ ಸಹಕರಿಸಿದ ಎಲ್ಲರಿಗೂ ಈ ಪ್ರಶಸ್ತಿ ಅರ್ಪಿಸುತ್ತೇನೆ ಎಂದು ಹೇಳಿದರು. ಅಲ್ಲದೆ, ಪ್ರಶಸ್ತಿ ಪ್ರದಾನ ವೇಳೆ ನೀಡಿದ ನಗದು ಕಾಣಿಕೆಯನ್ನು ಟ್ರಸ್ಟ್ಗೆ ಮರಳಿಸುವ ಮೂಲಕ ಖಾದ್ರಿ ಶಾಮಣ್ಣ ಟ್ರಸ್ಟ್ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಆರ್. ಪಿ. ಜಗದೀಶ್, ನಾಗಣ್ಣ, ಹಿರಿಯ ವಕೀಲ ಬಿ.ಟಿ. ವೆಂಕಟೇಶ್, ಟ್ರಸ್ಟ್ನ ಮುಖ್ಯಸ್ಥ ಎಚ್.ಆರ್.ಶ್ರೀಶ ಹಾಜರಿದ್ದರು.