ಸುದ್ದಿಮೂಲ ವಾರ್ತೆ
ತಿಪಟೂರು,ಆ.22: ಶಿಕ್ಷಣ ಕ್ಷೇತ್ರ ಎಷ್ಟು ಮುಖ್ಯವೋ ಹಾಗೆಯೇ ಕ್ರೀಡಾ ಕ್ಷೇತ್ರವೂ ಅಷ್ಟೇಮುಖ್ಯ. ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಾಗದೆ ಕ್ರೀಡೆಗಳಲ್ಲಿ ಭಾಗವಹಿಸುವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.
ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಲ್ಪತರು ನಗರಿ ತಿಪಟೂರು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಸಾಧ್ಯನೆ ಮಾಡಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರಾಗಿ ಪ್ರತಿನಿಧಿಸಿ ಸಾಧನೆಗಳಿಸಿರುವ ನಿದರ್ಶನಗಳಿವೆ. ಇಂದಿನ ಪೀಳಿಗೆಯ ಮಕ್ಕಳು ಓದುವುದು ಮಾತ್ರವಲ್ಲದೇ ಕ್ರೀಡೆಗೂ ಹೆಚ್ಚು ಒತ್ತು ನೀಡಬೇಕು. ವಿರಾಮದ ಸಮಯದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಂಡು ಸರಿಯಾದ ಅಭ್ಯಾಸ ಮಾಡಿದರೆ ಜಯ ನಿಮ್ಮದಾಗಲಿದೆ ಎಂದು ಕಿವಿ ಮಾತು ಹೇಳಿದರು.
ಇಂದಿನ ಕ್ರೀಡಾಕೂಟದಲ್ಲಿ 20ಕ್ಕೂ ಹೆಚ್ಚು ವಿವಿಧ ಕಾಲೇಜುಗಳಿಂದ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಸೋಲಿಗೂ ಕುಗ್ಗದೆ, ಗೆದ್ದಾಗ ಹಿಗ್ಗದೆ ಸಮಾನ ಮನಸ್ಸಿನಿಂದ ಕ್ರೀಡೆಯನ್ನು ಸ್ವೀಕರಿಸುವ ಮೂಲಕ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿ ಎಂದು ಶುಭ ಹಾರೈಸಿದರು.
ಷಡಕ್ಷರ ಮಠದ ಶ್ರೀ ರುದ್ರಮುನಿಸ್ವಾಮೀಜಿ, ಸದೃಢ ದೇಹ, ಆರೋಗ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಕ್ರೀಡೆ ಸಹಕಾರಿ, ವಿದ್ಯಾರ್ಥಿ ದಿಸೆಯಲ್ಲಿಯೇ ಮಕ್ಕಳು ಕ್ರೀಡಾಮನೋಭಾವ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಕಿರಿಯ ಪ್ರಾಥಮಿಕ ಶಾಲೆಯಿಂದಲೇ ಕ್ರೀಡೆಯಲ್ಲಿ ಹೆಚ್ಚು ತರಬೇತಿ ಕೊಡಿಸುವ ಕೆಲಸವಾಗಬೇಕಿದೆ. ಕ್ರೀಡೆಯಲ್ಲಿಯೂ ಇತರೆ ಕ್ಷೇತ್ರಗಳಿಗಿಂತ ಹೆಚ್ಚು ಸಾಧನೆ ಮಾಡುವ ಅವಕಾಶವಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಬೇಕು ಎಂದರು.
ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದ ನಗರಸಭಾ ಸದಸ್ಯೆ ಯಮುನಾ ಧರಣೇಶ್,ಕ್ರೀಡೆ ಉತ್ತಮ ಜೀವನ ಶೈಲಿ ಹಾಗೂ ನಾಯಕತ್ವಗುಣ ಬೆಳೆಯಲು ಕ್ರೀಡೆ ಸಹಕಾರಿಯಾಗಲಿದೆ.
ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆಯಲ್ಲಿ ಭಾಗವಹಿಸಬೇಕು. ನಿಮ್ಮಲ್ಲಿರುವ ಕೀಳರಿಮೆ,
ಹಿಂಜರಿಕೆ ಬಿಟ್ಟು ಮುಕ್ತ ಮನಸ್ಸಿನಿಂದ ಕ್ರೀಡೆಯಲ್ಲಿ ಭಾಗವಹಿಸಿ. ಕ್ರೀಡೆಯಲ್ಲಿ ಸತತ ಪರಿಶ್ರಮ, ಶಿಸ್ತು ಇದ್ದರೆ ಸಾಧನೆ ಸುಲಭವಾಗಲಿದೆ ಎಂದರು.
ಕ್ರೀಡಾಕೂಟದಲ್ಲಿ ಬಾಲಕರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಹಾಗೂ ನೋಡಲ್ ಅಧಿಕಾರಿ ಎಂ.ಡಿ.ಶಿವಕುಮಾರ್, ಕ್ರೀಡಾಕೂಟದ ಸಂಚಾಲಕ ಜೆ.ಎಂ ಚಂದ್ರಶೇಖರ್, ಕ್ರೋಮ್ ಪಿಯು ಕಾಲೇಜಿನ ಪ್ರಾಂಶುಪಾಲ ವೈ.ಸಿ. ಪ್ರಕಾಶ್, ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಲ್. ಶೇಖರ್, ಬಾಲಕಿಯರ ಕಾಲೇಜಿನ ಪ್ರಾಂಶುಪಾಲ ಪರಮಶಿವಮೂರ್ತಿ ಸೇರಿದಂತೆ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ದೈಹಿಕಶಿಕ್ಷಕರು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.