ಸುದ್ದಿಮೂಲ ವಾರ್ತೆ,
ಮೈಸೂರು, ಸೆ.7:ರಾಜ್ಯದ ಮಂಡ್ಯ, ಚಾಮರಾಜನಗರ- ರಾಮನಗರ- ಮಂಡ್ಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಇರುವ ಮತ್ತು ತಮಿಳುನಾಡು ಗಡಿ ಪ್ರದೇಶವೂ ಇರುವ ಕಾವೇರಿ ವನ್ಯಜೀವಿಧಾಮದಲ್ಲಿ ಅಪರೂಪದ ಅಚ್ಚಬಿಳಿ ಕಡವೆ ಇರುವುದು ಪತ್ತೆಯಾಗಿದೆ.
ಸುಮಾರು ದಶಕಕ್ಕೂ ಹೆಚ್ಚು ಕಾಲದಿಂದ ಕಾವೇರಿ ವನ್ಯಜೀವಿ ಧಾಮದಲ್ಲಿ ಪ್ರಾಣಿಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಖ್ಯಾತ ವನ್ಯಜೀವಿ ಜೀವಶಾಸ್ತ್ರಜ್ಞ ಡಾ.ಸಂಜಯ್ ಗುಬ್ಬಿ ಮತ್ತು ಅವರ ತಂಡದ ಕ್ಯಾಮರಾ ಕಣ್ಣಿಗೆ ಬಿಳಿ ಕಡವೆ ಬಿದ್ದಿದೆ.
ಸಾಮಾನ್ಯವಾಗಿ ಕಡವೆಗಳು ಕಂದು ಬಣ್ಣದಲ್ಲಿರುತ್ತವೆ. ಆದರೆ ಬಿಳಿ ಬಣ್ಣದಲ್ಲಿ ಇರುವುದು ಅಪರೂಪವೇ. ಇದೇ ಕಾವೇರಿ ವನ್ಯಜೀವಿ ಧಾಮದಲ್ಲಿ ಕೆಲ ವರ್ಷದ ಹಿಂದೆ ಬಿಳಿ ಬಣ್ಣದ ಕೆನ್ನಾಯಿಯೂ ಪತ್ತೆಯಾಗಿತ್ತು.
ಡಾ.ಸಂಜಯ್ ಗುಬ್ಬಿಅವರ ತಂಡ ಅಲ್ಲಿನ ಪ್ರಾಣಿಗಳ ಮಾಹಿತಿಯನ್ನು ಕ್ಯಾಮರಾ ಟ್ರಾಪ್ ಸೇರಿ ಹಲವು ಮಾರ್ಗದಲ್ಲಿ ಸಂಗ್ರಹಿಸುತ್ತಿದೆ. ಅಲ್ಲಿನ ಪ್ರಾಣಿಗಳ ಸಂಖ್ಯೆ, ವೈವಿಧ್ಯತೆಯನ್ನು ಅರಿಯುವ ಪ್ರಯತ್ನವಿದು. ಇದು ವೀರಪ್ಪನ್ ನಿಂದ ಬಾಧಿತವಾದ ಅರಣ್ಯ ಪ್ರದೇಶ. ಆದ್ದರಿಂದ ಇಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲೂ ದಶಕದಲ್ಲಿ ಗಣನೀಯ ಏರಿಕೆಯಾಗಿದೆ ಎಂಬುದು ಗಮನಾರ್ಹ.. ಅದರಲ್ಲೂ ಆನೆ, ಹುಲಿ, ಚಿರತೆಗಳಲ್ಲದೇ ಕೆನ್ನಾಯಿ, ಕರಡಿಯಂತಹ ಪ್ರಾಣಿಗಳೂ ಇಲ್ಲಿ ಇರುವುದು ಸಂಶೋಧನೆಯಿಂದ ಕಂಡು ಬಂದಿದೆ. ಕಡವೆ, ಜಿಂಕೆಗಳ ಸಂಖ್ಯೆಯೂ ಇಲ್ಲಿದೆ.
ತಂಡವು ಚಿರತೆಗಳ ಬಗ್ಗೆ ಅಧ್ಯಯನ ನಡೆಸಲು ಅಳವಡಿಸಿದ್ದ ಕ್ಯಾಮರಾ ಟ್ರಾಪ್ನಲ್ಲಿ ಬಿಳಿ ಬಣ್ಣದ (ಲ್ಯೂಸಿಸ್ಟಿಕ್) ಕಡವೆಯೊಂದರ ಚಿತ್ರ ಸೆರೆಯಾಗಿದೆ. ಇದು ಹೆಣ್ಣು ಕಡವೆಯಾಗಿದ್ದು, ಇನ್ನೊಂದು ವಯಸ್ಕ ಹೆಣ್ಣು ಕಡವೆಯೊಂದಿಗೆ ಕಂಡುಬಂದಿದೆ. ಆದ್ದರಿಂದ ಇದು ತನ್ನ ತಾಯಿಯೊಂದಿಗಿರುವ ಚಿಕ್ಕ ವಯಸ್ಸಿನ ಕಡವೆ ಎಂದು ಊಹಿಸಲಾಗಿದೆ.
ಬಿಳಿ ಬಣ್ಣ ಲ್ಯೂಸಿಸಮ್ ಎನ್ನುವುದು, ಪ್ರಾಣಿಗಳ ಚರ್ಮದಲ್ಲಿ ವರ್ಣದ್ರವ್ಯದ ಕೊರತೆಯುಂಟಾಗಿ, ಚರ್ಮ ಬಿಳಿ ಅಥವಾ ಮಂದ ಬಣ್ಣಕ್ಕೆ ಬದಲಾಗುವ ವಿರಳ ಪ್ರಕ್ರಿಯೆ. ಇದು ಪ್ರಾಣಿಗಳ ಬೆಳವಣಿಗೆಯಲ್ಲಿನ ದೋಷದಿಂದ ರೂಪುಗೊಂಡ ಫಿನೋಟೈಪ್ ನಿಂದಾಗಿ, ಹುಟ್ಟಿನಿಂದಲೇ ಸಹಜವಾಗಿ ಸಂಭವಿಸುವ ಸ್ಥಿತಿ ಎನ್ನಬಹುದು. ಇದು ಪ್ರಾಣಿಗಳ ಚರ್ಮದಲ್ಲಿ ಮೆಲನಿನ್ ಕೊರತೆಯಿಂದಾಗಿ ಉಂಟಾಗುವ ಅಲ್ಬಿನಿಸಂಗಿಂತ ಭಿನ್ನವಾಗಿದೆ. ಅಲ್ಬಿನಿಸಂ ಸ್ಥಿತಿಯಲ್ಲಿ ಪ್ರಾಣಿಗಳ ಕಣ್ಣು ಗುಲಾಬಿ ಅಥವಾ ಕೆಂಪು ಬಣ್ಣದಿಂದ ಕೂಡಿರುತ್ತದೆ. ಆದರೆ ಲ್ಯೂಸಿಸಂನಲ್ಲಿ ಪ್ರಾಣಿಗಳ ಕಣ್ಣುಗಳು ಸಹಜ ಬಣ್ಣವನ್ನು ಹೊಂದಿರುತ್ತವೆ. ಇದು ವಿಶೇಷ. ಪ್ರಕೃತಿಯಲ್ಲಿ ಇದು ಸಹಜವಾದರೂ ಸಂಶೋಧನೆ ದೃಷ್ಟಿಯಿಂದ ಇದು ಮುಖ್ಯವಾಗುತ್ತದೆ.
ಇಂತಹ ದತ್ತಾಂಶಗಳು ಈ ಸಸ್ಯಾಹಾರಿ ಪ್ರಾಣಿಗಳ ಜೀವಶಾಸ್ತ್ರದ ಬಗ್ಗೆ ನಮಗೆ ಅನೇಕ ಒಳನೋಟಗಳನ್ನು ನೀಡಬಹುದು ಮತ್ತು ಇದರ ಬಗ್ಗೆ ಹೆಚ್ಚಿನ ಸಂಶೋಧನೆಗೆ ಅವಕಾಶವನ್ನೂ ಮಾಡಿ ಕೊಡುತ್ತದೆ ಎನ್ನುತ್ತಾರೆ ಡಾ.ಸಂಜಯ್ ಗುಬ್ಬಿ.
ಅಳಿವಿನಂಚಿನ ಪಟ್ಟಿಯಲ್ಲಿ ಕಡವೆ
ಜಿಂಕೆಯ ಹಿರಿಯಣ್ಣನಂತಿರುವ ಕಡವೆ, ಹುಲಿಗೆ ಬಹು ಪ್ರಿಯವಾದ ಆಹಾರ. ಹುಲಿ ಕಡವೆಯನ್ನು ಹುಡುಕಿಕೊಂಡು ಹೋಗಿ ಬೇಟೆಯಾಡುತ್ತದೆ. ಜಿಂಕೆಗಿಂತ ಕೊಂಚ ಎತ್ತರ ಹಾಗೂ ದಪ್ಪವಾದ ಪ್ರಾಣಿ ಕಡವೆ ನಾಗರಹೊಳೆ, ಬಂಡೀಪುರ ಭಾಗದಲ್ಲಿ ಸಾಕಷ್ಟಿವೆ. ಅಂದರೆ ಅರಣ್ಯದಲ್ಲಿ ಕೆಲವು ಪ್ರಾಣಿಗಳಿದ್ದರೆ ಆಹಾರ ಸರಪಳಿ ಚೆನ್ನಾಗಿದೆ ಎಂದೇ ಅರ್ಥ. ಅದರಲ್ಲಿ ಕಡವೆ ಸಂಖ್ಯೆ ಹೆಚ್ಚಿದ್ದರೆ, ಹುಲಿಗಳೂ ಇರುತ್ತವೆ ಎನ್ನುವುದು ಅರಣ್ಯ ವ್ಯಾಖ್ಯಾನ. ಇಂತಹ ಕಡವೆ ಈಗ ಅತೀ ಅಳಿವಂಚಿನ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿದೆ.
ಕರಿಚಿರತೆ
ಚಿರತೆಗಳು ಸಾಮಾನ್ಯವಾಗಿ ಕಂದು ಬಣ್ಣದಲ್ಲಿಯೇ ಇರುತ್ತವೆ. ಆದರೆ ನಾಗರಹೊಳೆಯಲ್ಲಿ ಹಲವು ವರ್ಷಗಳ ಹಿಂದೆ ಸಂಪೂರ್ಣ ಕಪ್ಪು ಬಣ್ಣದಚಿರತೆ ಪತ್ತೆಯಾಗಿತ್ತು.