ಸುದ್ದಿಮೂಲ ವಾರ್ತೆ
ಕಲಬುರಗಿ, ಏ.3: ಜಿಲ್ಲೆಯ ರಾಜಕಾರಣದಲ್ಲೇ ತೀವ್ರ ಕುತೂಹಲ ಮೂಡಿಸಿರುವ ಮತಕ್ಷೇತ್ರಗಳಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರವು ಒಂದಾಗಿದ್ದು, ಮತಕ್ಷೇತ್ರದಲ್ಲಿ ಚುನಾವಣಾ ದಿನದಂದ ದಿನಕ್ಕೆ ಕಾವು ಹೆಚ್ಚುತ್ತಿದ್ದು. ಈಗಾಗಲೇ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿದ್ದು ಬಿಜೆಪಿ, ಜೆಡಿಎಸ್ ಪಕ್ಷದ ಅಭ್ಯರ್ಥಿ ಘೋಷಣೆ ಬಾಕಿ ಇದೆ.
ಕಾಂಗ್ರೆಸ್ ಭದ್ರಕೋಟೆಯಾಗಿರುವ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ನ ಕನೀಜ್ ಫಾತಿಮಾ ಅವರು ಶಾಸಕಿಯಾಗಿದ್ದಾರೆ. ಕಾಂಗ್ರೆಸ್ ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲೇ ಶಾಸಕಿ ಕನೀಜ್ ಫಾತಿಮಾ ಅವರ ಹೆಸರು ಘೋಷಣೆ ಮಾಡಲಾಗಿದ್ದು, ಚುನಾವಣೆಗೆ ತಯಾರಿ ನಡೆಸಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್ ಗಾಗಿ ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕ್ರೇಡಲ್ ಅಧ್ಯಕ್ಷ ಚಂದ್ರಕಾಂತ್ (ಚಂದು) ಪಾಟೀಲ್, ಶಿವಕಾಂತ್ ಮಹಾಜನ್ ಹಾಗೂ ಸುಭಾಷ್ ಬಿರಾದಾರ್ ಅವರು ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿಗಳಾಗಿದ್ದು, ಅಭ್ಯರ್ಥಿ ಆಯ್ಕೆ ಪಕ್ಷದ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿದೆ.
ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ ಚಂದು ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಪೈಪೋಟಿ ನೀಡಿದ್ದರು. ಈ ಬಾರಿ ಮತ್ತೊಮ್ಮೆ ಅಖಾಡಕ್ಕಿಳಿಯಲು ಸಿದ್ಧತೆ ನಡೆಸಿದ್ದು, ಟಿಕೆಟ್ ಗಾಗಿ ಪೈಪೋಟಿ ನಡೆಸಿದ್ದಾರೆ. ಇತ್ತ ಶಿವಕಾಂತ್ ಮಹಾಜನ್ ಕಮಲ ಟಿಕೆಟ್ ಗಿಟ್ಟಿಸಲು ತೀವ್ರ ಕಸರತ್ತು ನಡೆಸಿದ್ದಾರೆ. ಬಿಜೆಪಿ ರಾಜ್ಯ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಹಿರಿಯ ಮುಖಂಡ ಸುಭಾಷ ಬಿರಾದಾರ್ ಸಹ ಟಿಕೇಟ್ ಗಾಗಿ ಕಸರತ್ತು ನಡೆಸಿದ್ದಾರೆ. ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಅನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಕ್ಷೇತ್ರದಲ್ಲಿ ಕಳೆದು ಬಾರಿ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ, ಪಕ್ಷದ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ನಾಸಿರ್ ಹುಸೇನ್ ಉಸ್ತಾದ್ ಅವರು ಮತ್ತೊಮ್ಮೆ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಪಕ್ಷದ ವತಿಯಿಂದ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ. ಆಮ್ ಆದ್ಮಿ ಪಕ್ಷದಿಂದ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಸೈಯದ್ ಸಜ್ಜಾದ ಅಲಿ ಇನಾಮದಾರ ಹಾಗೂ ಎಸ್.ಡಿ.ಪಿ.ಐಯಿಂದ ಅಬ್ದುಲ್ ಪಟೇಲ್ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಅಲ್ಲದೇ, ಕ್ಷೇತ್ರದಲ್ಲಿ ಎಐಎಂಐಎಂ,
ಸೇರಿ ಪಕ್ಷೇತರ ಅಭ್ಯರ್ಥಿಗಳು ಸಹ ಚುನಾವಣೆ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿದೆ.
***
ಜಾತಿ ಲೆಕ್ಕಾಚಾರ:
ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾರರು ಹೊಂದಿರುವ ಮತಕ್ಷೇತ್ರವಾಗಿರುವ
ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳು ಅಧಿಕವಾಗಿದ್ದು, ಶೇ.53 ಪ್ರತಿಶತ ಮತಗಳು ಹೊಂದಿವೆ.
***
ಒಟ್ಟು ಮತದಾರರು: 3,00,493
ಪುರುಷರು: 1,49,840
ಮಹಿಳೆಯರು: 1,50,653
***
ಕಲಬುರಗಿ ಉತ್ತರ ಕ್ಷೇತ್ರದ ಚುನಾವಣಾ ಹಿನ್ನೋಟ:
2008:
ಖಮರುಲ್ ಇಸ್ಲಾಂ(ಕಾಂಗ್ರೆಸ್): 54,125
ಬಿ.ಜಿ ಪಾಟೀಲ್(ಬಿಜೆಪಿ) 39,168.
2013:
ಖಮರುಲ್ ಇಸ್ಲಾಂ(ಕಾಂಗ್ರೆಸ್)50,498.
ನಾಸಿರ್ ಹುಸೇನ್ ಉಸ್ತಾದ್ (ಕೆಜೆಪಿ) 30,377.
2018:
ಕನೀಜ್ ಫಾತಿಮಾ(ಕಾಂಗ್ರೆಸ್)64,311.
ಚಂದ್ರಕಾಂತ್ ಬಿ ಪಾಟೀಲ್ (ಚಂದು ಪಾಟೀಲ) (ಬಿಜೆಪಿ) 58,371.