ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ: ನ.30: ದಾಸರಲ್ಲೇ ಶ್ರೇಷ್ಠ ದಾಸರೆಂದರೆ ಕನಕದಾಸರು. ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು ಎಂದು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಹೇಳಿದರು.
ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಗುರುರಾಜ ಕಲ್ಯಾಣ ಮಂಟಪದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ದಾಸ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಕನಕದಾಸರು ಕನ್ನಡಿಗರ ಹೆಮ್ಮೆಯ ಸಂತರು. ಕನಕದಾಸರು 15-16 ನೇ ಶತಮಾನದಲ್ಲಿ ಸಮಾಜದಲ್ಲಿನ ಜಾತಿ ವ್ಯವಸ್ಥೆಯ ಬಗ್ಗೆ ಹೋರಾಡಿದ ಮಹಾನ್ ನಾಯಕ. ಇವರು ಕೆಳಸ್ತರದಿಂದ ಬಂದವರಾಗಿದ್ದರಿಂದ ಕೆಳ ಜಾತಿಯವರ ನೋವಿನ ಅರಿವು ಮೇಲ್ವರ್ಗದವರ ವೈಭವ ಜೀವನದ ಅನುಭವ ಚೆನ್ನಾಗಿ ಗೊತ್ತಿತ್ತು. ತಮ್ಮ ಕಾವ್ಯ ಕೀರ್ತನೆಗಳಲ್ಲಿ ಸಮಕಾಲೀನ ಜನಜೀವನದ ಚಿತ್ರಣವನ್ನು ಬಹು ಮಾರ್ಮಿಕವಾಗಿ ಚಿತ್ರಿಸಿ ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿ ನಾಡಿನಲ್ಲಿ ಜನಿಸಿದ್ದು ನಮ್ಮ ಭಾಗ್ಯವಾಗಿದೆ ಎಂದರು.
ದಾಸ ಸಾಹಿತ್ಯದಲ್ಲಿ ದಿಗ್ಗಜರೆನಿಸಿಕೊಂಡಿರುವ ಕನಕದಾಸರು ಒಬ್ಬರಾಗಿದ್ದು, ಇವರಿಗೆ ದಾಸ ಸಾಹಿತ್ಯದಲ್ಲಿ ವಿಶಿಷ್ಠ ಸ್ಥಾನವಿದೆ. ಸಾಮಾಜಿಕ ಸಮಾನತೆ ಹಾಗೂ ಧರ್ಮ ಉದ್ಧಾರಕ್ಕಾಗಿ ಶ್ರಮಿಸಿದ ಕನಕದಾಸರು ವ್ಯಕ್ತಿಯ ವ್ಯಕ್ತಿತ್ವ ಮತ್ತು ಚಿಂತನೆಯಲ್ಲಿ ಬದಲಾವಣೆ ಆಗಬೇಕೆಂಬ ಹಂಬಲ ಇಟ್ಟುಕೊಂಡಿದ್ದರು. ಸಾಮಾಜಿಕ ವ್ಯವಸ್ಥೆಯಲ್ಲಿ ಅವರ ಕೊಡುಗೆ ಶ್ರೇಷ್ಠವಾಗಿದೆ. ಇವರ ಸಾಧನೆಯನ್ನು ಎಂದಿಗೂ ಮರೆಯುವಂತಿಲ್ಲ. ಇದನ್ನು ಎಲ್ಲರೂ ವಿಶಾಲ ಮನೋಭಾವದಿಂದ ಪರಿಗಣಿಸಬೇಕಿದೆ ಹಾಗೂ ಕನ್ನಡ ಭಾಷೆಯ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದವರು ಕನಕದಾಸರು ಎಂದರು.
ಶಾಸಕರಾದ ಪ್ರದೀಪ್ ಈಶ್ವರ್ ಮಾತನಾಡಿ, ಕನಕದಾಸರ ಭವನ ನಿರ್ಮಾಣಕ್ಕಾಗಿ ಜಮೀನು ಮಂಜೂರು ಮಾಡಲು ಎರಡು ಮೂರು ವರ್ಷದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹಾಗಾಗಿ ಈ ಸಮುದಾಯದ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಬೇಕು ಎಂದರು.
ಡಾ. ಸಿ.ಕೆ. ಜಗದೀಶ್ ಕನಕದಾಸರ ವಿಚಾರ ಧಾರೆಗಳ ಕುರಿತು ಉಪನ್ಯಾಸ ನೀಡಿದರು. ಸಮುದಾಯದಲ್ಲಿ ಎಸ್. ಎಸ್.ಎಲ್. ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕನಕದಾಸರ ಪಲ್ಲಕ್ಕಿಗಳು ಹಾಗೂ ಜಾನಪದ ಕಲಾತಂಡಗಳೊಂದಿಗೆ ಮರಳುಸಿದ್ದೇಶ್ವರ ದೇವಾಲಯದ ಮುಂಭಾಗದಿಂದ ಅಂಬೇಡ್ಕರ್ ಭವನದ ಮುಂಭಾಗದಿಂದ ಗುರುರಾಜ ಕಲ್ಯಾಣ ಮಂಟಪದವರೆಗೆ ಸಂಭ್ರಮದಿಂದ ಮೆರವಣಿಗೆ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್ ನಾಗೇಶ್, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಉಪ ವಿಭಾಗಾಧಿಕಾರಿ ಡಿ.ಎಚ್ ಅಶ್ವಿನ್, ತಹಸಿಲ್ದಾರ್ ಅನಿಲ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್. ಮನಿಷ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ರಾಮಚಂದ್ರಪ್ಪ, ತಾಲೂಕು ಅಧ್ಯಕ್ಷ ಎಂ.ಆನಂದ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಂಘದ ಎಲ್ಲಾ ಪದಾಧಿಕಾರಿಗಳು, ಮುಖಂಡರು, ಹಾಜರಿದ್ದರು.