ಮೈಸೂರು,ಅ.15:ಇಲ್ಲಿನ ಚಾಮುಂಡಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ಹೆಸರಾಂತ ಚಲನಚಿತ್ರ ಸಂಗೀತ ನಿರ್ದೇಶಕರಾದ ನಾದಬ್ರಹ್ಮ ಹಂಸಲೇಖ ಅವರು ಚಾಮುಂಡಿದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ -2023 ಕ್ಕೆ ಚಾಲನೆ ನೀಡಿದರು.
ಪ್ರಪಂಚದ ವೇದಿಕೆಯಲ್ಲಿ..
ಈ ವೇಳೆ ಮಾತನಾಡಿದ ಹಂಸಲೇಖ ಅವರು, ವೀರ ಭಾರತದ ಕಥೆಯ ಜೀವಂತ ಮಹಾಕಾವ್ಯವೆ ಈ ದಸರಾ. ಕನ್ನಡ ನಮ್ಮ ಶೃತಿಯಾಗಬೇಕು, ಅಭಿವೃದ್ದಿಯ ಕೃತಿಯಾಗಬೇಕು. ಕನ್ನಡಕ್ಕೆ ಒಂದು ಮಿತಿ ಇದೆ. ಆದರೆ, ಅದರ ಭಾವಕ್ಕೆ ಮಿತಿ ಇಲ್ಲ. ನಮ್ಮ ಕನ್ನಡವನ್ನ ಪ್ರಪಂಚದ ವೇದಿಕೆಯಲ್ಲಿ ಪ್ರತಿಷ್ಠಾಪಿಸಬೇಕು ಎಂದು ತಮ್ಮ ಭಾಷಣದುದ್ದಕ್ಕೂ ಕನ್ನಡ ಭಾಷೆಯ ಏಳಿಗೆ ಬಗ್ಗೆ ಸಲಹೆ ನೀಡುತ್ತಾ ತಮಗಿರುವ ಕನ್ನಡ ಪರ ಕಳಕಳಿಯನ್ನು ಅಭಿವ್ಯಕ್ತಿಸಿದರು.
ನಾನು ಹಚ್ಚಿದ್ದು ಕನ್ನಡ ದೀಪ, ಹಚ್ಚಿದ್ದು ನಾನೂ ಆದರೂ ಅದರ ಚೈತನ್ಯ ಈ ನಾಡಿನ ಹಿರಿಯರದ್ದು, ದಸರಾ ಎನ್ನುವುದು ಒಂದು ಜೀವಂತ ಕಥಾ ಕಾವ್ಯ. ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯ ಈ ದಸರಾ ಆಚರಣೆಗೆ ಕಥಾವಸ್ತು. ಈ ಜೀವಂತ ದಸರಾ ಮುಂದೆ ಮಹಾ ಕಾವ್ಯವಾಗಿ ರೂಪುಗೊಳ್ಳಲಿ ಎಂದು ಬಯಸಿದರು.
30 ದಿನಗಳಲ್ಲಿ ಕನ್ನಡ ಕಲಿಸಿ:
ಕನ್ನಡದ ಭಾಷೆಗೆ ಮಿತಿಯಿದೆ ಆದರೆ ಅದರ ಭಾವಕ್ಕೆ ಮಿತಿಯಿಲ್ಲ. ಕನ್ನಡದ ಶಾಂತಿ ಸಮೃದ್ಧಿಯನ್ನು ಹೆಚ್ಚಿಸಬೇಕು. ಕರ್ನಾಟಕದಲ್ಲಿ ವಾಸ ಮಾಡುತ್ತಾ ಇರುವ ಎಷ್ಟು ಜನರಿಗೆ ಕನ್ನಡ ಗೊತ್ತಿಲ್ಲ ಎಂಬ ಸಮೀಕ್ಷೆ ಆಗಿ, ಅವರಿಗೆ 30 ದಿನಗಳಲ್ಲಿ ಕನ್ನಡ ಕಲಿಸಿ, ಅವರಿಗೆ ಕನ್ನಡ ಪಟ್ಟ ಎಂಬ ಕಾರ್ಡ್ ನೀಡಬೇಕು. ಈ ಕಾರ್ಡ್ ಆಸ್ಪತ್ರೆ ಗಳಲ್ಲಿ ಬಿಪಿಎಲ್ ಕಾರ್ಡ್ ಗೆ ಸಿಗುವ ಸೌಲಭ್ಯಗಳು ಸಿಗಬೇಕು ಎಂದು ಕಾರ್ಪೊರೇಟ್ ಕಂಪನಿಗಳ ಕನ್ನಡಿಗರ ಒಂದು ತಂಡ ನನಗೆ ಸಲಹೆ ನೀಡಿ ಮನವಿ ಮಾಡಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಸಂಘಟನೆಗಳು ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಮಾಡಲು ಈ ಕಾರ್ಯ ಮಾಡುವಲ್ಲಿ ಮುಂದಾಗಬೇಕು. ಈ ಕಾರ್ಯದಲ್ಲಿ ನಾನು ಕೈ ಜೋಡಿಸುತ್ತೆನೆ. ಕುವೆಂಪು ಅವರು ಕನ್ನಡವನ್ನು ಉತ್ತುಂಗ ಶಿಖರಕ್ಕೆ ಏರಿಸಿದ್ದಾರೆ.
ಅಂಬಾರಿ ಹೊರುವ ಆನೆ ಅಭಿಮನ್ಯು ಬಗ್ಗೆ ಒಂದು ಮಾಹಿತಿ ಬಂತು. ಅಭಿಮನ್ಯು ಮಾವುತನ ಸಲಹೆಯಂತೆ ಮರದ ದಿಮ್ಮಿಗಳನ್ನು ಲಾರಿಗೆ ಹಾಕುವಾಗ 2 ನ್ನು ಉಳಿಸಿ ಎಲ್ಲವನ್ನೂ ಹಾಕಿತು. ಉಳಿದ 2 ದಿಮ್ಮಿಗಳನ್ನು ಹಾಕಲು ನಿರಾಕರಿಸಿತು. ಅಧಿಕಾರಿಗಳ ಒತ್ತಾಯದ ಮೇರೆಗೆ ಮಾವುತ ಇನ್ನೆರಡು ದಿಮ್ಮಿಗಳನ್ನು ಹಾಕಲು ಹೇಳಿದನು. ಆ ದಿಮ್ಮಿ ಗಳನ್ನು ಹಾಕಿದಾಗ ಎಲ್ಲಾ ದಿಮ್ಮಿಗಳು ಕೆಳಕ್ಕೆ ಜಾರಿದವು. ಇದರಿಂದ ಪ್ರಾಣಿಗಳಿಗೆ ಲಾರಿಯಲ್ಲಿ ತುಂಬಬಹುದಾದ ಸಾಮರ್ಥ್ಯ ತಿಳಿದಿತ್ತು ಎಂದು ಹೇಳುವ ಮೂಲಕ ಮೂಕ ಪ್ರಾಣಿಗಳಿಗೆ ಭೂಮಿ ಮತ್ತಿತರ ವಿಷಯಗಳ ಇರುವ ಜ್ಞಾನದ ಬಗ್ಗೆ ಮಾಹಿತಿ ನೀಡಿದರು.
ಚಾಮುಂಡಿ ಬೆಟ್ಟ ಅಭಿವೃದ್ಧಿ:
ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಮಾತನಾಡಿ, ಚಾಮುಂಡಿ ಬೆಟ್ಟ ವನ್ನು ಅಭಿವೃದ್ಧಿ ಮಾಡಲು ಸರ್ಕಾರ ಕ್ರಮವಹಿಸಲಾಗಿದೆ. ಈ ಬಾರಿ ಮಳೆ ಕೊರತೆ ಆಗಿರುವುದರಿಂದ ಸಾಂಪ್ರದಾಯಿಕ ದಸರಾ ಆಚರಿಸುತ್ತಿದ್ದ, ಶಾಂತಿ ಸೌಹಾರ್ದತೆ ಯಿಂದ ಎಲ್ಲರೂ 9 ದಿನಗಳ ಕಾಲ ದಸರಾ ಆಚರಿಸೋಣ ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಮಾತನಾಡಿ, ಇಂದು ನಮ್ಮಲ್ಲಿಯೇ ರಾಕ್ಷಸ ಗುಣಗಳು ಇವೆ. ಇವನ್ನು ಬಿಟ್ಟು ಎಲ್ಲರೂ ಶಾಂತಿ ಸೌಹಾರ್ದತೆ ಯಿಂದ ನಡೆದುಕೊಂಡು ಹೋಗಬೇಕು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇದ್ದು,ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾಗೆ ಬರುತ್ತಾರೆ. 9 ದಿನಗಳು ನಡೆಯುವ ದಸರಾ ಆಚರಣೆಯಲ್ಲಿ ಎಲ್ಲರೂ ಭಾಗಿಗಳಾಗಿ ಎಂದರು.
ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಕೆ ವೆಂಕಟೇಶ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವ ಕೆ ಹೆಚ್ ಮುನಿಯಪ್ಪ, ಇಂಧನ ಇಲಾಖೆಯ ಸಚಿವ ಕೆ ಜೆ ಜಾರ್ಜ್, ಹಿಂದುಳಿದ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ ಮೈಸೂರು ಮೇಯರ್ ಶಿವಕುಮಾರ್, ಶಾಸಕರಾದ ತನ್ವೀರ್ ಸೇಠ್, ಅನಿಲ್ ಕುಮಾರ್, ಶ್ರೀವತ್ಸ, ಜಿ ಡಿ ಹರೀಶ್ ಗೌಡ, ಡಿ ರವಿಶಂಕರ್, ಕೆ. ಹರೀಶ್ ಗೌಡ, ದರ್ಶನ್ ದ್ರುವ ನಾರಾಯಣ್ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಿ ತಿಮ್ಮಯ್ಯ, ಉಪ ಮೇಯರ್ ಡಾ ರೂಪ ಸೇರಿದಂತೆ ಮತ್ತಿತರರು ಇದ್ದರು.