ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ.4 : ತಾಲೂಕಿನ ಕನ್ನಮಂಗಲ ಗ್ರಾ.ಪಂಯಲ್ಲಿ ಎರಡನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರ ಸ್ಥಾನಕ್ಕೆ ಗೌರಮ್ಮ ಮತ್ತು ಮೇಘಶ್ರೀ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಟಸ್ವಾಮಿ ಮತ್ತು ಸೋಮಶೇಖರ್ ನಾಮಪತ್ರವನ್ನು ಸಲ್ಲಿಸಿದ್ದರು. ಒಟ್ಟು 26 ಸದಸ್ಯರ ಪೈಕಿ ಅಧ್ಯಕ್ಷ ಸ್ಥಾನದ ಗೌರಮ್ಮ ಅವರಿಗೆ 18 ಮತಗಳು ಮತ್ತು ಉಪಾಧ್ಯಕ್ಷ ಸ್ಥಾನದ ವೆಂಕಟಸ್ವಾಮಿ ಅವರಿಗೆ 19 ಮತಗಳು ಬಂದಿರುತ್ತದೆ. ಮುಂದಿನ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಧಿಗೆ ನೂತನ ಅಧ್ಯಕ್ಷರಾಗಿ ಗೌರಮ್ಮ ಮತ್ತು ಉಪಾಧ್ಯಕ್ಷರಾಗಿ ವೆಂಕಟಸ್ವಾಮಿ ಆಯ್ಕೆಯಾಗಿರುತ್ತಾರೆ ಎಂದು ಚುನಾವಣಾಧಿಕಾರಿ ಶ್ರೀನಾಥ್ಗೌಡ ಘೋಷಿಸಿದರು.
ನೂತನ ಅಧ್ಯಕ್ಷೆ ಗೌರಮ್ಮ ಮಾತನಾಡಿ, ಗ್ರಾ.ಪಂಯಲ್ಲಿನ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಮುಖ್ಯವಾಗಿ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಲಾಗುತ್ತದೆ ಎಂದರು.
ನೂತನ ಉಪಾಧ್ಯಕ್ಷ ವೆಂಕಟಸ್ವಾಮಿ(ಅಪ್ಪು) ಮಾತನಾಡಿ, ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ನಮ್ಮದೇ ರಾಜ್ಯ ಸರಕಾರ ಇರುವುದರಿಂದ ಹೆಚ್ಚಿನ ಅನುದಾನವನ್ನು ತರುವುದರ ಮೂಲಕ ಅಭಿವೃದ್ಧಿಪಡಿಸಲಾಗುವುದು. ಎಲ್ಲಾ ಸದಸ್ಯರನ್ನು ಮುಖಂಡರನ್ನು ಒಳಗೊಂಡು ಗ್ರಾ.ಪಂಯನ್ನು ಮಾದರಿಯನ್ನಾಗಿಸಲಾಗುತ್ತದೆ ಎಂದರು.
ಜಿ.ಪಂ ಮಾಜಿ ಸದಸ್ಯ ಕೆ.ಸಿ.ಮಂಜುನಾಥ್ ಮಾತನಾಡಿ, ಕನ್ನಮಂಗಲ ಗ್ರಾ.ಪಂಯು ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಹೆಚ್ಚು ಒಳಗೊಂಡಿರುವುದರಿಂದ ಸತತವಾಗಿ ಗ್ರಾ.ಪಂ ಕಾಂಗ್ರೆಸ್ ವಶದಲ್ಲಿಯೇ ಇರುತ್ತದೆ. ಈಗಾಗಲೇ ಉತ್ತಮ ಗ್ರಂಥಾಲಯ, ಸುಸ್ಸಜ್ಜಿತವಾದ ಮೈದಾನ, ಸೋಲಾರ್ ದೀಪ ಅಳವಡಿಕೆ, ಹೈಟೆಕ್ ಮಾದರಿಯ ಗ್ರಾ.ಪಂಯನ್ನಾಗಿಸಲಾಗಿದೆ. ಮುಂದೆ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಗ್ರಾಮಗಳಿಗೆ ನೀಡಿ, ಗ್ರಾಮಗಳನ್ನು ಸಹ ಮಾದರಿಯನ್ನಾಗಿಸಲು ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಶ್ರಮಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಪಂ ಸದಸ್ಯರಾದ ಕೆ.ಆರ್.ನಾಗೇಶ್, ಲಕ್ಷ್ಮೀಕಾಂತ, ಕೃಷ್ಣಯ್ಯ, ನರಸಿಂಹಮೂರ್ತಿ, ಎಸ್.ಜಿ.ಮಂಜುನಾಥ್, ಎನ್.ಮಂಜುನಾಥ್, ನಿವಿತ.ಆರ್, ನಂದಿನಿ.ಎಸ್.ಜಿ, ಪವಿತ್ರ.ಎಸ್, ರಶ್ಮಿ.ಎಂ, ವನಜಾಕ್ಷಮ್ಮ, ಆಶಾ.ಎಸ್, ಆಶಾ.ಕೆ.ಬಿ, ಮೇಘಶ್ರೀ, ಮೋಸಿನ್ತಾಜ್, ಶಾಲಿನಿ, ಶಿಲ್ಪ.ಕೆ.ಎಂ, ನೇತ್ರಾವತಿ.ಜಿ, ಅಂಬುಜಾ, ಅಂಬರೀಶ್, ಮುಖಂಡರಾದ ಸಿ.ಜಗನ್ನಾಥ್, ಅರುಣ್, ಪಟಾಲಪ್ಪ, ಪಿಡಿಒ ಶ್ರೀನಿವಾಸ್, ಕಾರ್ಯದರ್ಶಿ ಸೀನಪ್ಪ, ಮತ್ತಿತರರು ಇದ್ದರು.