ಸುದ್ದಿಮೂಲ ವಾರ್ತೆ
ರಾಮನಗರ, ಜೂ 28 : ನಗರದೇವತೆ ಬನ್ನಿಮಹಾಕಾಳಿ ಅಮ್ಮನವರ ಕರಗ ಮಹೋತ್ಸವ ಮತ್ತು ಅಗ್ನಿಕೊಂಡ ಮಹೋತ್ಸವ ಯಶಸ್ವಿಯಾಗಿ ನೆರೆವೇರಿತು.
ನಗರದ ಮಂಡಿಪೇಟೆಯಲ್ಲಿ ಭಕ್ತ ಸಂರಕ್ಷಣಾರ್ಥ ನೆಲೆಸಿರುವ ಬನ್ನಿಮಹಾಕಾಳಿ ಅಮ್ಮನವರಿಗೆ ಪ್ರತಿ ಬಾರಿ ಆಷಾಢ ಮಾಸದಲ್ಲಿ ಕರಗ ಮಹೋತ್ಸವ ನೆರೆವೇರುತ್ತದೆ. ಮಂಗಳವಾರ ಸಂಜೆ ದೇವಾಲಯದಿಂದ ಹೊರಟ ಕರಗ ಇಡೀ ರಾತ್ರಿ ನಗರದ ಪ್ರಮುಖ ಬಡಾವಣೆಗಳಲ್ಲಿ ಭಕ್ತರಿಗೆ ದರ್ಶನ ಕೊಟ್ಟು ಬುಧವಾರ ಬೆಳಿಗ್ಗೆ ಮಂಡಿಪೇಟೆಯ ದೇವಾಲಯದ ಬಳಿ ತತ್ಕಾಲಿಕವಾಗಿ ನಿರ್ಮಿಸಲಾಗಿರುವ ಅಗ್ನಿಕೊಂಡವನ್ನು ಹಾಯ್ದು ಪುನಃ ದೇವಾಲಯವನ್ನು ಪ್ರವೇಶಿಸಿದೆ.
ಕರಗ ಮಹೋತ್ಸವದ ಪ್ರಯುಕ್ತ ಶ್ರೀಮಾತೆಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಮಂಗಳವಾರ ದೇವಾಲಯದಲ್ಲಿ ಧಾರ್ಮಿಕ ಕೈಂಕರ್ಯಗಳು ನೆರೆವೇರಿದವು. ಸಾವಿರಾರು ಸಂಖ್ಯೆಯಲ್ಲಿ ಸುಮಂಗಲಿಯರು ತಂಬಿಟ್ಟು ಆರತಿ ಬೆಳಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು. ಈ ಬಾರಿಯೂ ಯೋಗೇಶ್ ಕರಗಧಾರಣೆ ಮಾಡಿದ್ದರು.