ಸುದ್ದಿಮೂಲವಾರ್ತೆ
ಗಂಗಾವತಿ,ಏ.೨- ಮಾಜಿ ಸಂಸದ ಹೆಚ್.ಜಿ.ರಾಮುಲು ಅವರ ರಾಜಕೀಯ ಗರಡಿ ಮನೆಯಲ್ಲಿ ಬೆಳೆದ ಅವರ ಕುಟುಂಬದ ಕಟ್ಟಾ ಬೆಂಬಲಿಗರಲ್ಲೊಬ್ಬರಾದ ವಿಧಾನ ಪರಿಷತ್ ಮಾಜಿ ಸದಸ್ಯರು ಮತ್ತು ಗಂಗಾವತಿ ವಿಧಾನ ಸಭಾ ಕ್ಷೇತ್ರದ ಹಾಲುಮತ ಸಮಾಜದ ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಕರಿಯಣ್ಣ ಸಂಗಟಿ ಶೀಘ್ರದಲ್ಲಿ ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿದಿದೆ.
ಕರಿಯನ್ಣ ಸಂಗಟಿ ಅವರು ಭಾನುವಾರ ಗಂಗಾವತಿಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಇದಕ್ಕೆ ಪುಷ್ಠಿ ನೀಡಿದಂತಾಗಿದೆ.
ಭಾನುವಾರ ತಾಲೂಕಿನ ಮರಳಿ ಗ್ರಾಮದ ಸಮೀಪದ ರಾಯಲ್ ರಿಚ್ ಕೌಂಟಿ ಖಾಸಗಿ ಹೊಟೇಲ್ನಲ್ಲಿ ಬಿಜೆಪಿಯಿಂದ ಆಯೋಜಿಸಿದ್ದ ವಿಭಾಗ ಮಟ್ಟದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನಕ್ಕೆ ಬಿ.ಎಲ್.ಸಂತೋಷ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕರಿಯಣ್ಣ ಸಂಗಟಿ ಆಗಮಿಸಿ ಅವರು ತಂಗಿದ್ದ ಕೊಠಡಿಯಲ್ಲಿ ತೆರಳಿ ಮಾತುಕತೆ ನಡೆಸಿ ಹೊರ ಬಂದರು.
ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಸಂಸದ ಸಂಗಣ್ಣ ಕರಡಿ, ಮಾಜಿ ಸಂಸದ ಸಾಲೋಣಿ ನಾಗಪ್ಪ, ಮಾಜಿ ಶಾಸಕ ಜಿ.ವೀರಪ್ಪ, ಮುಖಂಡ ವಿರುಪಾಕ್ಷಪ್ಪ ಸಿಂಗನಾಳ, ಮತ್ತಿತರು ಬಿಜೆಪಿ ಹಿರಿಯ ನಾಯಕರು ಇದ್ದರು. ಈ ಕುರಿತು ಅವರು ಬಿಜೆಪಿ ಸಖ್ಯ ಬೆಳೆಸುವ ಕುರಿತು ಸ್ಪಷ್ಟಪಡಿಸಿಲ್ಲ. ಆದರೆ ಕರಿಯಣ್ಣ ಸಂಗಟಿ ಬಿಜೆಪಿ ಸೇರುತ್ತಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿ ಬಂತು.
ಕರಿಯಣ್ಣ ಸಂಗಟಿ ಕಳೆದ ೨೦೧೮ರಲ್ಲಿ ಗಂಗಾವತಿ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ೧೪ ಸಾವಿರಕ್ಕೂ ಅಧಿಕ ಮತಗಳನ್ನು ಪಡೆದ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸೋಲಲು ಹಾಗೂ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಗೆಲವಿಗೆ ಕಾರಣರಾಗಿದ್ದರು. ಎಚ್.ಜಿ.ರಾಮುಲುರವರ ಕುಟುಂಬದ ಆಪ್ತ ವಲಯದಲ್ಲಿ ಸಂಗಟಿ ಗುರುತಿಸಿಕೊಂಡಿದ್ದರಿಂದ ಸಧ್ಯ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಹೆಚ್.ಆರ್.ಶ್ರೀನಾಥ್ರಿಗೆ ಲಭಿಸಿದರೆ ಮಾತ್ರ ಅವರು ಕಾಂಗ್ರೆಸ್ ತೊರೆಯುವುದಿಲ್ಲ. ಶ್ರೀನಾಥ್ರ ಬದಲು ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಲಭಿಸಿದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.