ಸುದ್ದಿಮೂಲ ವಾರ್ತೆ
ಬೆಂಗಳೂರು, ನ.29: ರಾಜ್ಯದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಹಾಗೂ ಬೆಂಗಳೂರಿನ ಎಸ್ಟಿಪಿಐ ಜಂಟಿಯಾಗಿ ಆಯೋಜಿಸಿರುವ ಬೆಂಗಳೂರು ಟೆಕ್ ಸಮ್ಮಿಟ್ನ 26ನೇ ಆವೃತ್ತಿ ಇಂದಿನಿಂದ ಆರಂಭವಾಗಿದೆ.
ಬೆಂಗಳೂರು ಅರಮನೆಯಲ್ಲಿ ‘ಬ್ರೇಕಿಂಗ್ ದಿ ಬೌಂಡರೀಸ್’ ಘೋಷವಾಕ್ಯದ 26ನೇ ‘ಬೆಂಗಳೂರು ತಂತ್ರಜ್ಞಾನ ಶೃಂಗ–2023’ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿ ಕ್ಷೇತ್ರದಲ್ಲಿ ಕರ್ನಾಟಕ ಬೀರಿರುವ ಪರಿಣಾಮ ಅಸಾಮಾನ್ಯ. 5500 ಐಟಿ- ಐಇಟಿಎಸ್ ಕಂಪನಿಗಳು, 750 ಬಹುರಾಷ್ಟ್ರೀಯ ಕಂಪೆನಿಗಳು ಇರುವ ರಾಜ್ಯದಿಂದ ದೇಶದ ರಫ್ತಿಗೆ ಸುಮಾರು 85 ಶತಕೋಟಿ ಡಾಲರ್ ಕೊಡುಗೆ ನೀಡುತ್ತಿದೆ. ಐ.ಟಿ ಕ್ಷೇತ್ರ ವು ಸುಮಾರು 12 ಲಕ್ಷ ವೃತ್ತಿಪರರಿಗೆ ನೇರ ಉದ್ಯೋಗ ಅವಕಾಶಗಳನ್ನು ಹಾಗೂ 31 ಲಕ್ಷ ಪರೋಕ್ಷ ಉದ್ಯೋಗಗಳನ್ನು ಒದಗಿಸಿದೆ. ದೇಶದ ಒಟ್ಟು ಸಾಫ್ಟ್ವೇರ್ ರಫ್ತಿನ ಪೈಕಿ ಕರ್ನಾಟಕದ ಪಾಲು ಶೇ 40 ರಷ್ಟಿದ್ದು, ಜಾಗತಿಕ ಐಟಿ ದಿಗ್ಗಜ ಎಂಬ ಸ್ಥಾನವನ್ನು ಗಿಟ್ಟಿಸಿಕೊಂಡಿದೆ ಎಂದರು.
ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಲು ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ. ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಬೆಂಗಳೂರು ಇಡೀ ದೇಶದಲ್ಲೇ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿದೆ. ಮಾಹಿತಿ ತಂತ್ರಜ್ಞಾನ ನೀತಿಯನ್ನು ಮೊದಲ ಬಾರಿಗೆ ರೂಪಿಸಿದ ಹೆಗ್ಗಳಿಕೆ ರಾಜ್ಯಕ್ಕೆ ಸಲ್ಲುತ್ತದೆ. ಅಲ್ಲದೇ ನವೋದ್ಯಮ ನೀತಿಯನ್ನು ಜಾರಿಗೊಳಿಸಲಾಗಿದ್ದು, ನವೋದ್ಯಮಗಳನ್ನು ಸ್ಥಾಪಿಸಲು ಮುಂದೆ ಬರುವ ಯುವ ಉದ್ಯಮಿಗಳಿಗೆ ಅಗತ್ಯವಿರುವ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಕೈಗಾರಿಕೆಗಳ ಪ್ರೋತ್ಸಾಹಕ್ಕೆ ಸಂಬಂಧಿಸಿದಂತೆ ನೀತಿ ನಿಯಮಗಳನ್ನು ರೂಪಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕೈಗಾರಿಕೆಗಳ ಸ್ಥಾಪನೆಗಾಗಿ ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ. ನಾವೀನ್ಯತೆ ಹಾಗೂ ಬೆಳವಣಿಗೆ ಕಾಣುತ್ತಿರುವ ವ್ಯಾಪಾರ ವಹಿವಾಟಿಗೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ. ಏಕ ಗವಾಕ್ಷಿ ಮೂಲಕ ಮಂಜೂರಾತಿಗಳನ್ನು ನೀಡಲಾಗುತ್ತಿದೆ ಎಂದರು.
ಬೆಂಗಳೂರು ಟೆಕ್ ಸಮಾವೇಶದ ಸಂದರ್ಭದಲ್ಲೇ ಪರಿಷ್ಕೃತ ಜೈವಿಕ ತಂತ್ರಜ್ಞಾನ ನೀತಿ ರೂಪಿಸಲು ಚಿಂತನೆ ನಡೆದಿದೆ. ದಿನೇದಿನೇ ಬೆಳವಣಿಗೆ ಕಾಣುತ್ತಿರುವ ಅನಿಮೇಷನ್, ಗೇಮಿಂಗ್, ಕಾಮಿಕ್ಸ್ ಸೇರಿದಂತೆ ಇನ್ನಿತರ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಶೀಘ್ರದಲ್ಲೇ ಪ್ರತ್ಯೇಕ ನೀತಿಯೊಂದನ್ನು ಜಾರಿಗೊಳಿಸಲಿದೆ ಎಂದರು.
ಜೈವಿಕ ತಂತ್ರಜ್ಞಾನ ಕುರಿತ ಕರಡು ನೀತಿಯನ್ನು ಬಿಡುಗಡೆ ಮಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, ‘ಕರ್ನಾಟಕವು ಬಹಳ ಹಿಂದಿನಿಂದಲೂ ಹೊಸತನ ಮತ್ತು ಬೆಳವಣಿಗೆಗೆ ಹೆಸರಾಗಿದೆ’ ಎಂದರು.
ಸುಲಲಿತ ವಾಣಿಜ್ಯ- ವಹಿವಾಟು ಸೂಚ್ಯಂಕದಲ್ಲಿ ಕರ್ನಾಟಕವು ಮುಂಚೂಣಿ ಸ್ಥಾನದಲ್ಲಿದೆ. ಹಲವು ಸುಧಾರಣೆಗಳನ್ನು ಜಾರಿಗೆ ತಂದ ಪರಿಣಾಮವಾಗಿ ಇದು ಸಾಧ್ಯವಾಗಿದೆ. ದೇಶದ ಐ.ಟಿ. ರಫ್ತಿನಲ್ಲಿ ಕರ್ನಾಟಕದ ಪಾಲು ಶೇಕಡ 40ರಷ್ಟು ಇದೆ ಎಂದರು.
‘ಸರ್ಕಾರವು ಕೈಗೊಳ್ಳಬಹುದಾದ ಕ್ರಮಗಳು ಯಾವುದಿರಬೇಕು ಎಂಬುದನ್ನು ತಿಳಿಯಲು ನಾವು ಉದ್ಯಮದ ಪ್ರಮುಖರು, ಅಕಾಡೆಮಿಕ್ ವಲಯದ ಪ್ರಮುಖರು ಹಾಗೂ ಸರ್ಕಾರದ ಪಾಲುದಾರರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತೇವೆ’ ಎಂದು ಪಾಟೀಲ ಹೇಳಿದರು.
ಐ.ಟಿ. ಮತ್ತು ಬಿ.ಟಿ. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ತಂತ್ರಜ್ಞಾನ ಉದ್ಯಮಗಳ ಬೆಳವಣಿಗೆಗೆ ಪೂರಕವಾದ ಕಾರ್ಯಪರಿಸರ ಉಂಟುಮಾಡಲು ಸರ್ಕಾರವು ಆದ್ಯತೆ ಮುಂದುವರಿಸಲಿದೆ ಎಂದರು
‘ಗ್ರಾಮೀಣ ಕರ್ನಾಟಕಕ್ಕೆ ಹೊಸ ಶಿಕ್ಷಣ ವ್ಯವಸ್ಥೆ ರೂಪಿಸುವಲ್ಲಿ ತೊಡಗಿದ್ದೇವೆ. ಕಂಪನಿಗಳು ತಮ್ಮ ಸಿಎಸ್ಆರ್ ಹಣವನ್ನು ಅದಕ್ಕಾಗಿ ವೆಚ್ಚ ಮಾಡಿದರೆ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಕೂಡ ಹೆಚ್ಚು ಸ್ಪರ್ಧಾತ್ಮಕವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ರಾಜ್ಯದ ಮಾಹಿತಿ ತಂತ್ರಜ್ಞಾನ ವಿಷನ್ ಗ್ರೂಪ್ನ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಅವರು, ‘ಕಳೆದ ವರ್ಷದಲ್ಲಿ ಐ.ಟಿ. ಉದ್ಯಮವು ಶೇ.9ರಷ್ಟು ಬೆಳವಣಿಗೆ ಸಾಧಿಸಿದೆ. ಜಾಗತಿಕ ಆರ್ಥಿಕ ವ್ಯವಸ್ಥೆಯು ಮಂದಗತಿಯಲ್ಲಿದ್ದರೂ, ಮಧ್ಯಮಾವಧಿಯಿಂದ ದೀರ್ಘಾವಧಿಯಲ್ಲಿ ಈ ಉದ್ಯಮವು 350 ಬಿಲಿಯನ್ ಡಾಲರ್ ಗಾತ್ರಕ್ಕೆ ಬೆಳೆಯುವ ನಿರೀಕ್ಷೆ ಇದೆ’ ಎಂದರು.
ಮಾಹಿತಿ ತಂತ್ರಜ್ಞಾನ ಉದ್ಯಮದಲ್ಲಿ ರಾಜ್ಯವು ಹೊಂದಿರುವ ನಾಯಕತ್ವವನ್ನು ಕಾಯ್ದುಕೊಳ್ಳಬೇಕು ಎಂದಾದರೆ ಅದಕ್ಕೆ ಸೂಕ್ತವಾದ ಕಾರ್ಯತಂತ್ರ ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ರಾಜ್ಯದ ಉದ್ಯಮ ವಲಯದ ಪ್ರಮುಖರಾದ ಎಎಂಡಿ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾರ್ಕ್ ಪೇಪರ್ ಮಾಸ್ಟರ್, ವಿಪ್ರೊ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ರಿಷದ್ ಪ್ರೇಮ್ಜಿ, ಕಿರಣ್ ಮಜುಂದಾರ್ ಶಾ, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾಶರ್ಮಾ, ಐಟಿ ಕಾರ್ಯದರ್ಶಿ ಏಕ್ ರೂಪ್ ಕೌರ್, ಐಟಿ ನಿರ್ದೇಶಕ ದರ್ಶನ ಮತ್ತಿತರರು ಇದ್ದರು.