ಸುದ್ದಿಮೂಲ ವಾರ್ತೆ
ಬೆಂಗಳೂರು, ಜು.17: ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಧಮನಕಾರಿ ನೀತಿ ಹೊಂದಿದೆ ಬಿಜೆಪಿ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ಒಕ್ಕೂಟದ ಮಹಾ ಸಭೆ ಭಾರತ ದೇಶದ ರಾಜಕೀಯ ಬದಲಾವಣೆಗೆ ನಾಂದಿ ಆಗಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿರುವ ಮತ್ತು ಸುಳ್ಳು ಭರವಸೆ ನೀಡಿ ವಂಚಿಸಿದವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. 26 ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಮುನ್ನಡೆಯಲು ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಈ ಸರ್ವಾಧಿಕಾರಿ ಸರ್ಕಾರದ ಕ್ರಮಗಳಿಗೆ ಮುಕ್ತಿ ಹಾಡಿ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ನಾವು ಇಲ್ಲಿ ಸಭೆ ಸೇರುತ್ತಿದ್ದೇವೆ ಎಂದರು.
ಜುಲೈ 20 ರಂದು ಸಂಸತ್ತಿನ ಅಧಿವೇಶನವೂ ಪ್ರಾರಂಭವಾಗುತ್ತಿದ್ದು, ವಿರೋಧ ಪಕ್ಷಗಳು ಅದಕ್ಕಾಗಿ ತಂತ್ರವನ್ನು ರೂಪಿಸಲಿವೆ. ನಾವು ಅಧಿಕಾರ ಪಡೆಯಲು ಸಭೆ ಸೇರುತ್ತಿಲ್ಲ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಡೆಯುತ್ತಿರುವ ಸಭೆ. ಈ ಸರ್ಕಾರ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದು, ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಸಮಯ ಬಂದಾಗ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಇಂದು 26 ವಿರೋಧ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಿವೆ. ಇದು ವಿರೋಧ ಪಕ್ಷಗಳ ಎರಡನೇ ಸಭೆಯಾಗಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಭಾರತೀಯ ರಾಜಕೀಯ ಸನ್ನಿವೇಶದಲ್ಲಿ ಇದು ಬದಲಾವಣೆಯ ಸಮಯವಾಗಿದೆ. ಪಾಟ್ನಾ ಸಭೆಯ ನಂತರ ಪ್ರತಿಪಕ್ಷಗಳನ್ನು ಸುಲಭವಾಗಿ ಸೋಲಿಸುತ್ತೇವೆ ಎಂದು ಈಗ ಸಭೆಗಳನ್ನು ಮಾಡುತ್ತಿದ್ದಾರೆ. ಅದು ಪ್ರತಿಪಕ್ಷಗಳ ಒಗ್ಗಟ್ಟಿನ ನಿಜವಾದ ಯಶಸ್ಸು ಎಂದು ವೇಣುಗೋಪಾಲ್ ಹೇಳಿದರು.
ಎನ್ಡಿಎ ಮತ್ತು ಯುಪಿಎ ಸೇರದ ಕೆಲ ಪ್ರಾದೇಶಿಕ ರಾಜಕೀಯ ಪಕ್ಷಗಳಿಗೆ ಆಹ್ವಾನ ನೀಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆ.ಸಿ. ವೇಣುಗೋಪಾಲ್, ಜಾತ್ಯತೀತ ಧೋರಣೆ ಹೊಂದಿದ ರಾಜಕೀಯ ಪಕ್ಷಗಳು ತಾವು ಯಾರ ಜೊತೆ ಇರಬೇಕು ಎಂಬುದನ್ನು ನಿರ್ಣಯ ಮಾಡಬೇಕು. ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್ ಕಳೆದ ಚುನಾವಣೆಯಲ್ಲಿ ಏನು ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ಯಾವುದೇ ರಾಜಕೀಯ ಪಕ್ಷ ಇರಲಿ ತ್ರಿಶಂಕುವಾಗಿ ಇರಬಾರದು. ಯುಪಿಎ ಅಥವಾ ಎನ್ಡಿಎ ಕಡೆ ಇರಬೇಕು. ಇಲ್ಲವಾದರೆ ಅವರ ರಾಜಕೀಯ ಅಸ್ತಿತ್ವವೇ ಉಳಿಯದಂತಹ ಸನ್ನಿವೇಶ ಇದಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದ್ದಕ್ಕಿದ್ದಂತೆ ಎನ್ಡಿಎ ನೆನಪಾಗಿದೆ. ಪಾಟ್ನಾದಲ್ಲಿ ಜೂ. 23ರಂದು ನಡೆದ ಪ್ರತಿಪಕ್ಷಗಳ ಒಕ್ಕೂಟದ ಸಭೆಯ ಪರಿಣಾಮ ಎನ್ಡಿಎಗೆ ಹೊಸ ಜೀವ ತುಂಬುವ ಪ್ರಯತ್ನಗಳು ನಡೆಯುತ್ತಿವೆ. ಇದರ ಪರಿಣಾಮ ನಾಳೆ ದೆಹಲಿಯಲ್ಲಿ ಎನ್ಡಿಎ ಮೈತ್ರಿಕೂಟಗಳ ಸಭೆ ಕರೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ದಕ್ಷಿಣದಿಂದ ಯಾವ ಸಂದೇಶ ನೀಡಲು ಹೊರಟಿದ್ದೀರಿ ಎಂಬ ಪ್ರಶ್ನೆಗೆ, “ಈ ಸಭೆಯಲ್ಲಿ ಯಾವ ವಿಚಾರ ಚರ್ಚೆ ಮಾಡಲಾಗುವುದು ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಇದು ಕೇವಲ ಕಾಂಗ್ರೆಸ್ ತೀರ್ಮಾನ ಮಾತ್ರವಲ್ಲ. ಎಲ್ಲ ಪಕ್ಷಗಳೂ ಸೇರಿ ತೀರ್ಮಾನ ಮಾಡಲಿದ್ದಾರೆ. ಸೋನಿಯಾ ಗಾಂಧಿ ಅವರ ಅನುಭವ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಶಕ್ತಿ ತುಂಬಲಿದೆ” ಎಂದು ತಿಳಿಸಿದರು.
ವಿರೋಧ ಪಕ್ಷಗಳ ಮೈತ್ರಿಯ ನಾಯಕ ಯಾರು ಎಂದು ಕೇಳಿದ ಪ್ರಶ್ನೆಗೆ, ‘ನಾಯಕತ್ವದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ದೇಶದ ಸಮಸ್ಯೆ ಬಗ್ಗೆ ಗಮನಹರಿಸಿ. ಪ್ರತಿನಿತ್ಯ ಪ್ರಜಾಪ್ರಭುತ್ವಸ ಮೇಲೆ ದಾಳಿ ಆಗುತ್ತದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ಕನಿಷ್ಠ ಪಕ್ಷ ಶಾಂತಿ ಕಾಪಾಡುವ ಮನವಿ ಸಹ ಮಾಡುತ್ತಿಲ್ಲ. ಇಂತಹ ಶಕ್ತಿವಂತ ನಾಯಕನಿಗೆ ಯಾಕೆ ಸಮಸ್ಯೆ ಪರಿಹರಿಸುವ ಸಾಮರ್ಥ್ಯವಿಲ್ಲ. ಚೀನಾ ಅತಿಕ್ರಮಣ ಸಮರ್ಥನೆ ಮಾಡಿಕೊಳ್ಳುವುದು ಯಾವ ನಾಯಕತ್ವ?’ ಎಂದು ಪ್ರಶ್ನಿಸಿದರು.
ಕಳೆದ ಪಾಟ್ನಾ ಸಭೆಯಲ್ಲಿ 24 ಪಕ್ಷಗಳು ಭಾಗವಹಿಸಿದ್ದರೆ ಈ ಬಾರಿ 26 ಪಕ್ಷಗಳು ಭಾಗವಹಿಸಲಿದ್ದು, ಇದರಿಂದ ಬಿಜೆಪಿಗೆ ನಡುಕ ಹುಟ್ಟಿದೆ. ಹಾಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ ಪಡಿಸಿಕೊಂಡು ಸರ್ಕಾರ ಪತನಗೊಳ್ಳುವ ಕೆಲಸ ಮಾಡುತ್ತಿದ್ದು, ಕರ್ನಾಟಕದಲ್ಲಿ ಮಾಡಿದಂತೆ ಮಹಾರಾಷ್ಟ್ರದಲ್ಲಿ ಮಾಡಿದೆ. ಅದಕ್ಕಾಗಿ ಕರ್ನಾಟಕದಲ್ಲಿ ಆ ಪಕ್ಷಕ್ಕೆ ಯಾವ ರೀತಿ ಪಾಠ ಕಲಿಸಿದರೋ ಅದೇ ರೀತಿ ಮಹಾರಾಷ್ಟ್ರದಲ್ಲಿ ಸಹ ಕಲಿಸಲಿದ್ದಾರೆ ಎಂದು ಹೇಳಿದರು.
ಸಭೆಗೆ ಯಾರಿಗೂ ಆಹ್ವಾನವಿಲ್ಲ
ಪ್ರಜಾಪ್ರಭುತ್ವ ರಕ್ಷಿಸಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಈ ಜಂಟಿ ಹೋರಾಟ ಕರ್ನಾಟಕದಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಈ ಮೂಲಕ ದೇಶಕ್ಕೆ ಒಂದು ಹೊಸ ಸಂದೇಸ ಹೋಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಈ ಸಭೆಗೆ ಕರ್ನಾಟಕದ ಯಾವ ಸಚಿವರಿಗೂ, ಶಾಸಕರಿಗೂ, ಪಕ್ಷದ ಮುಖಂಡರಿಗೂ ಆಹ್ವಾನವಿಲ್ಲ. ಕೇವಲ ಆಹ್ವಾನಿತರು ಮಾತ್ರ ಆಗಮಿಸಬೇಕು ಎಂದು ಸಚಿವರು ಮತ್ತು ಪಕ್ಷದ ಮುಖಂಡರಿಗೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.